ಶತ್ರುವನ್ನು ನಾವು ಮಿತ್ರರನ್ನಾಗಿ ಮಾಡಿಕೊಂಡು ಬದುಕಬೇಕು: ಡಿಸಿಎಂ

ಶತ್ರುವನ್ನು ನಾವು ಮಿತ್ರರನ್ನಾಗಿ ಮಾಡಿಕೊಂಡು ಬದುಕಬೇಕು: ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿ ನಾವು ಅಣ್ಣ-ತಮ್ಮಂದಿರಂತೆ ಬದುಕಬೇಕು. ನಮಗೆ ಯಾರು ಶತ್ರುಗಳು ಬೇಡ. ನಾವೆಲ್ಲರೂ ಒಂದೇ ಭೂಮಿ ತಾಯಿಯ ಮಕ್ಕಳು. ನಿನ್ನ ಜಾತಿ ಬೇರೆ ನನ್ನ ಜಾತಿ ಬೇರೆ ಎಂದು ನಮ್ಮ ಪಕ್ಷದಲ್ಲಿ ಯಾರು ಸಹ ಭೇದಭಾವ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.

ಶತ್ರುವನ್ನು ನಾವು ಮಿತ್ರರನ್ನಾಗಿ ಮಾಡಿಕೊಂಡು ಬದುಕಬೇಕು. ಯಾರು ಯಾರಿಗೂ ಶಾಶ್ವತ ಮಿತ್ರರಲ್ಲ, ಶತ್ರುಗಳಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಮಹಾಲಕ್ಷ್ಮಿಬಡಾವಣೆಯ ಆದಿಚುಂಚನಗಿರಿ ಮಠದ ಬಿಜಿಎಸ್ ಟಿಯಲ್ಲಿ ನಡೆದ ಯುಪಿಎಸ್ ಸಿ ತೇರ್ಗಡೆ ಕರ್ನಾಟಕದ ಅಭ್ಯರ್ಥಿಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಭಾವಂತ ಯುವಕ, ಯುವತಿಯರು ಈ ದೇಶದ ಆಸ್ತಿ. ನೀವು ಬಹಳ ಶ್ರಮದಿಂದ ಆಸೆಯಿಂದ ಓದಿ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿದ್ದೀರಿ ಅದು ಸದ್ಬಳಕೆಯಾಗಲಿ ಎಂದರು. ಹಣ ಮತ್ತು ಸಂಪತ್ತು ನೀರಿನಂತೆ. ಬದುಕಿನ ದೋಣಿ ಸಾಗಲು ಎಷ್ಟುಬೇಕೊ ಅಷ್ಟು ಸಂಗ್ರಹ ಮಾಡಿಕೊಳ್ಳಬೇಕು. ಅತಿಯಾಗಿ ಆಸೆ ಮಾಡಿದರೆ, ದೋಣಿ ಮುಳುಗುತ್ತದೆ ಎಂದು ನಮ್ಮ ಸ್ವಾಮಿಗಳು ಹೇಳಿದ್ದಾರೆ. ಅವರು ಹಾಕಿಕೊಟ್ಟರುವ ಮಾರ್ಗದರ್ಶನದಲ್ಲಿ ನಾವು ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾಂಗ ಕೆಲಸ ಮಾಡುತ್ತದೆ. ನಾವು ಶಾಸಕಾಂಗ ಮಾಡುವ ಕಾನೂನು ನೀವು ಕಾರ್ಯಾಂಗದವರು ಜಾರಿ ಮಾಡಬೇಕು. ನಮ್ಮ ತಪ್ಪನ್ನು ತಿದ್ದಲು ನ್ಯಾಯಾಂಗ ಇದೆ. ಮೂರು ಅಂಗಗಳು ಕೆಲಸ ಮಾಡದಿದ್ದರೆ ಟೀಕೆ ಮಾಡಲು ಪತ್ರಿಕಾರಂಗ ಇದೆ. ಮಠಗಳು, ಸಂಘ ಸಂಸ್ಥೆಗಳು ಜನರಿಗೆ ಸೇವೆ ಮಾಡುತ್ತಾ ಬಂದಿವೆ. ಎಲ್ಲಾ ಧರ್ಮ ಹಾಗೂ ವರ್ಗದ ಜನರು ಸಾಮರಸ್ಯದಿಂದ ಬಾಳಲಿ. ಸಮಾಜದಲ್ಲಿ ಶಾಂತಿ ನೆಲೆಸಲಿ. ಸಮಾಜದ ಋಣ ತೀರಿಸಬೇಕು. ಆಗ ಬದುಕು ಸಾರ್ಥಕ ಎಂದು ಬಾಲಗಂಗಾಧರನಾಥ ಸ್ವಾಮಿಗಳು ಹೇಳಿದ್ದಾರೆ. ಸಮಾಜದ ಋಣ ತೀರಿಸುವಾಗ ಧರ್ಮದಿಂದ ತೀರಿಸಬೇಕು ಎಂದರು.

ದೇವರು ನಿಮಗೆ ಕೊಟ್ಟಿರುವ ಅವಕಾಶದಲ್ಲಿ ನೀವು ಸಮಾಜದ ಋಣ ತೀರಿಸಿ ಎಂದು ನುಡಿದರು.ಅಪಾಯದಲ್ಲಿ ಧೈರ್ಯ, ಕಷ್ಟದಲ್ಲಿ ತಾಳ್ಮೆ, ನಷ್ಟದಲ್ಲಿ ಸಹನೆ, ತೊಂದರೆಯಲ್ಲಿ ಶಾಂತಿ, ದುಃಖದಲ್ಲಿ ಸಮಾಧಾನದಿಂದ ಇರಬೇಕು. ಆಗ ನಮಗೆ ಭಯ ಇರುವುದಿಲ್ಲ. ನಿಮಗೆ ಬದುಕಿನಲ್ಲಿ ಯಾರು ಸಹಾಯ ಮಾಡಿದ್ದಾರೆ ಅವರನ್ನು ಸ್ಮರಿಸಬೇಕು. ಉಪಕಾರ ಸ್ಮರಣೆ ಇಲ್ಲವಾದರೆ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದರು.

 

Related