ಗದಗ, ಫೆ. 19: ಜಾತಿ- ಧರ್ಮಗಳ ಮಧ್ಯೆ ಕಂದಕ ಸೃಷ್ಟಿಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಇಸ್ಲಾಂ ಧರ್ಮದ ವ್ಯಕ್ತಿಯೊಬ್ಬರನ್ನು ಲಿಂಗಾಯತ ಪರಂಪರೆಯ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ರೋಣ ತಾಲ್ಲೂಕಿನ ಅಸೂಟಿ ಗ್ರಾಮದ ದಿವಾನಿ ಶರೀಫ್ ಅವರಿಗೆ ಖಜೂರಿ ಮಠದ ಶ್ರೀಮುರುಘರಾಜೇಂದ್ರ ಕೊರಣ್ಣೇಶ್ವರ ಶೀವಯೋಗಿಗಳು ಲಿಂಗ ದೀಕ್ಷೆ ನೀಡಿದ್ದಾರೆ.
ಬಸವ ತತ್ವಕ್ಕೆ ಮಾರುಹೋಗಿರುವ ಶರೀಫ್ ಅವರನ್ನು ಅಸೂಟಿ ಗ್ರಾಮದ ಮುರುಘರಾಜೇಂದ್ರ ಕೊರುಣ್ಣೇಶ್ವರ ಶಾಂತಿಧಾಮಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ.
‘ಕೊರಣೇಶ್ವರಮಠ ಬಸವ ಪರಂಪರೆಯ ಮಠವಾದ್ದರಿಂದ ಇಲ್ಲಿ ಯಾವುದೆ ಜಾತಿ- ಧರ್ಮ, ಬೇಧಭಾವವಿಲ್ಲ. ವಚನವನ್ನ ಪ್ರಚನ ಮಾಡಿಕೊಂಡವರಿಗೆ ಇಲ್ಲಿ ಮುಕ್ತ ಅವಕಾಶವಿದೆ. ಯಾವುದೇ ಸಮಾಜದವರು ಈ ಆಶ್ರಮಕ್ಕೆ ಬರಬಹುದು’ ಎಂದು ಮುರುಘರಾಜೇಂದ್ರ ಶಿವಯೋಗಿಗಳು ಮುಕ್ತ ಆಹ್ವಾನ ನೀಡಿದ್ದಾರೆ.
`ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎನ್ನುವ ಕನಕದಾಸರ ಮಾತಿನಂತೆ, ಇಸ್ಲಾಂ ಧರ್ಮದ ವ್ಯಕ್ತಿಯೊಬ್ಬರು ನಡೆದುಕೊಂಡಿದ್ದಾರೆ. ಹುಟ್ಟಿದ್ದು ಮುಸ್ಲಿಂ ಸಮುದಾಯವಾದರೂ ಬಸವ ತತ್ವಕ್ಕೆ ಮಾರುಹೋಗಿ ಲಿಂಗ ದೀಕ್ಷೆ ಪಡೆದುಕೊಂಡಿದ್ದು, ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾರೆ. ಖಜೂರಿ ಮಠದ ಶ್ರೀಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳು ಲಿಂಗ ದೀಕ್ಷೆಯನ್ನು ನೀಡಿ ಶಿಷ್ಯನನ್ನಾಗಿಯೂ ಸ್ವೀಕಾರ ಮಾಡಿದ್ದಾರೆ.
‘ದಿವಾನಿ ಶರೀಫ್ ಅವರು ಬಸವತತ್ವದ ಆಧಾರದ ಮೇಲೆ ಮುಂದಿನ ಜೀವನ ನಡೆಸಲಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆ ಸಾರಲು, ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಲು ಮುಸ್ಲಿಂ ವ್ಯಕ್ತಿಗೆ ಲಿಂಗ ದೀಕ್ಷೆ ನೀಡಿ ಈ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದೇವೆ. ಜೊತೆಗೆ ದಿವಾನಿ ಶರೀಫ್ ಅವರ ತಂದೆ ಹಾಗೂ ಕುಟುಂಬ ಸಹ ಶಿವಯೋಗಿ ಶ್ರೀಗಳ ಭಕ್ತರಾಗಿದ್ದು, ಕುಟುಂಬದವರು ಹಾಗೂ ಸ್ಥಳೀಯ ಭಕ್ತರ ಒಪ್ಪಿಗೆಯ ಮೇರೆಗೆ ಈ ಆಶ್ರಮಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದೇವೆ. ಹಿಂದೂ- ಮುಸ್ಲಿಂ- ಕ್ರೈ ಸ್ತ- ಬೌದ್ಧ ನಾವೆಲ್ಲಾ ಒಂದು ಎಂಬ ಸಂದೇಶ ಸಾರಲು ಈ ಲಿಂಗ ದೀಕ್ಷೆ ನೀಡಿದ್ದೇವೆ’ ಎಂದು ಮುರುಘರಾಜೇಂದ್ರ ಶಿವಯೋಗಿಗಳು ಹೇಳಿದರು.
32 ವರ್ಷದ ದಿವಾನಿ ಶರೀಫ್ ಸಾಬ್ ಈಗ ಲಿಂಗ ದೀಕ್ಷೆ ಪಡೆದು ಈಗ ಶರೀಫ್ ಸ್ವಾಮೀಜಿಯಾಗಿದ್ದಾರೆ. ಮಂದಿರ, ಮಸೀದಿಗಾಗಿ ನಿತ್ಯ ಕಲಹ ನಡೆಯುತ್ತಿದೆ. ಆದರೆ, ಇಸ್ಲಾಂ ಧರ್ಮದ ವ್ಯಕ್ತಿ ಸಮಾಜಕ್ಕೆ ಕೋಮು-ಸೌಹಾರ್ದತೆ ಸಾರಲು ಲಿಂಗ ದೀಕ್ಷೆ ತೆಗೆದುಕೊಂಡು ಬಸವ ತತ್ವದಡಿ ಅಸೂಟಿ ಕೊರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿದ್ದಾರೆ. ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಹಂಬಲದಿದಂ ಬಸವತತ್ವಕ್ಕೆ ಮಾರು ಹೋಗಿದ್ದಾರೆ.
ಅಸೂಟಿ ಗ್ರಾಮದ ಹೊರವಲಯದಲ್ಲಿ 2ಎಕರೆ ಜಮೀನಿನಲ್ಲಿ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮಠಕ್ಕೆ ದಿವಾನಿ ಶರೀಫ್ ಪೀಠಾಧಿಪತಿ ಆಗಲಿದ್ದಾರೆ. ಶರೀಫ್ ಅವರಿಗೆ ಈಗಾಲೇ ಮದುವೆಯಾಗಿದ್ದು, ಹೆಂಡತಿ ಹಾಗೂ 4 ಮಕ್ಕಳು ಇದ್ದಾರೆ. ತಂದೆ ರಹೀಮಸಾಬ್ ಹಾಗೂ ತಾಯಿ ಪಾತೀಮ್ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ಸಂಸಾರ ತ್ಯಜಿಸಿ, ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎಂದು ಲಿಂಗ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ.
ಎಲ್ಲಾ ಧರ್ಮದ ಆಚರಣೆಗಳನ್ನು ಎಲ್ಲಾ ಜನಾಂಗದವರು ಬೆರೆತು ಆಚರಿಸಿದರೆ ಸಮಾಜದಲ್ಲಿ ಕೂಡಿ ಬಾಳುವ ವಾತಾವರಣ ನಿರ್ಮಾಣ ಸಾಧ್ಯ ಎಂದು ದಿವಾನಿ ಶರೀಫ್ ಸ್ವಾಮಿ ಹೇಳಿದ್ದಾರೆ.
ಹಿಂದೂ- ಮುಸ್ಲಿಮರು ಭಾವೈಕ್ಯತೆಯಿಂದ ಬಾಳಬೇಕು. ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ನಾವೆಲ್ಲರೂ ಒಂದಾಗಿ ಬಾಳಬೇಕು ಎನ್ನುವ ನಿಟ್ಟಿನಲ್ಲಿ ಶಾಂತಿ ಮಂತ್ರವನ್ನು ಜಪಿಸುತ್ತಾ, ಜಗತ್ತು ಉದ್ಧಾರ ಮಾಡಲು ಈ ಸ್ವಾಮೀಜಿ ಹೊರಟ್ಟಿದ್ದಾರೆ.
ಲಿಂಗ ಹಾಗೂ ರುದ್ರಾಕ್ಷಿ ಮಾಲೆ ಧರಿಸಿ ವೃತಾಚರಣೆ ಮಾಡುತ್ತಿರೋ ಕೊರಣೇಶ್ವರ ಮಠದ ಉತ್ತರಾಧಿಕಾರಿ ಶರೀಫ್ ಸ್ವಾಮಿ ಕಾರ್ಯ ಸಮಾಜಕ್ಕೊಂದು ಸೌಹಾರ್ದತೆಯ ನೀತಿಪಾಠ ಹೇಳಿದಂತಿದೆ.