ಸದಸ್ಯರಿಗೆ ಎಚ್ಚರಿಕೆ

ಸದಸ್ಯರಿಗೆ ಎಚ್ಚರಿಕೆ

ಬೆಂಗಳೂರು : ನಿಯಮದಂತೆ ಪ್ರತಿ ವರ್ಷ ತಮ್ಮ ಆಸ್ತಿ ಹಾಗೂ ಸಾಲದ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರನ್ನು ಅನರ್ಹಗೊಳಿಸುವುದಾಗಿ ಹೈಕೋರ್ಟ್ ಮೌಖಿಕ ಎಚ್ಚರಿಕೆ ನೀಡಿದೆ.

ಪಾಲಿಕೆಯ 34 ಸದಸ್ಯರು ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿ ಮತ್ತು ಸಾಲದ ವಿವರಗಳನ್ನು ಮೇಯರ್‌ಗೆ ಒದಗಿಸಿಲ್ಲ ಎಂದು ಆರೋಪಿಸಿ ಅನಿಲ್‌ಕುಮಾರ್ ಶೆಟ್ಟಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿತು.

ಕೆಎಂಸಿ ಕಾಯ್ದೆಯ ಸೆಕ್ಷನ್ 19ರ ಪ್ರಕಾರ ಪಾಲಿಕೆ ಸದಸ್ಯರು ಪ್ರತಿ ವರ್ಷ ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿ ಮತ್ತು ಸಾಲದ ವಿವರ ಒದಗಿಸುವುದು ಕಡ್ಡಾಯ. ಆದರೆ, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೆಲ ಸದಸ್ಯರು ವಿಫಲರಾಗಿದ್ದಾರೆ. ಅಂಥವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಪ್ರತಿವಾದಿಗಳಾಗಿರುವ 34 ಪಾಲಿಕೆ ಸದಸ್ಯರು ಆಸ್ತಿ ವಿವರ ಒದಗಿಸಿರುವ ಕುರಿತ ದಾಖಲೆಗಳು ಹಾಗೂ ವಿವರಣೆಗಳನ್ನು ವಾರದೊಳಗೆ ಬಿಬಿಎಂಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ, ಆ ಎಲ್ಲ ಸದಸ್ಯರನ್ನು ಅನರ್ಹಗೊಳಿಸಲು ತೀರ್ಪು ಹೊರಡಿಸಲಾಗುವುದು ಎಂದು ತಿಳಿಸಿದರು.

Related