ಕೊರೋನಾಗೆ: ಮತ್ತೊಬ್ಬ ಪೇದೆ ಬಲಿ

ಕೊರೋನಾಗೆ: ಮತ್ತೊಬ್ಬ ಪೇದೆ ಬಲಿ

ಬೆಂಗಳೂರು : ಕೊರೋನಾ ಸೋಂಕು ತಗುಲಿ ಇತ್ತಿಚೆಗಷ್ಟೇ ನಗರದ ಎಎಸ್‌ಐಯೊಬ್ಬರು (ಸಹಾಯಕ ಪೊಲೀಸ್ ಸಬ್‌ಇನ್ಸ್ಪೆಕ್ಟರ್) ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಸುನೀಗಿದ್ದಾರೆ.

ಕಲಾಸಿಪಾಳ್ಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ೫೪ ವರ್ಷದ ಹೆಡ್ ಕಾನ್ಸ್ಟೆಬಲ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಬೆಳಿಗ್ಗೆ ೭ರ ಸುಮಾರಿಗೆ ತೀರಿಕೊಂಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಹೆಡ್ ಕಾನ್ಸ್ಟೆಬಲ್ ಸೇರಿ ಕಲಾಸಿಪಾಳ್ಯ ಠಾಣೆಯ ಎಂಟು ಜನರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹೆಡ್ ಕಾನ್ಸ್ಟೆಬಲ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಸಾವಿನಿಂದಾಗಿ ಪೊಲೀಸರು ಮತ್ತಷ್ಟು ಚಿಂತೆಗೀಡಾಗಿದ್ದಾರೆ.
ಎಎಸ್‌ಐಗೂ ಸೋಂಕು;

ಬೆಂಗಳೂರು ವಿಲ್ಸನ್ ಗಾರ್ಡನ್ ಠಾಣೆ ಎಎಸ್‌ಐಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ೫೯ ವರ್ಷದ ಎಎಸ್‌ಐರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಲ್ಸನ್ ಗಾರ್ಡನ್ ಠಾಣೆಯನ್ನೂ ಸ್ಯಾನಿಟೈಸಿಂಗ್ ಮಾಡಲಾಗಿದ್ದು, ಹಲವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.

Related