ಇತಿಹಾಸ ಗೊತ್ತಿದ್ದವರು ಸುಳ್ಳುಗಳನ್ನು ನಂಬಲು ಸಾಧ್ಯವೇ ಇಲ್ಲ: ಸಿಎಂ

ಇತಿಹಾಸ ಗೊತ್ತಿದ್ದವರು ಸುಳ್ಳುಗಳನ್ನು ನಂಬಲು ಸಾಧ್ಯವೇ ಇಲ್ಲ: ಸಿಎಂ

ಹಂಪಿ (ಹೊಸಪೇಟೆ): ಇತಿಹಾಸ ಗೊತ್ತಿದ್ದವರು, ಬಸವಣ್ಣನ ವಚನ ಕ್ರಾಂತಿಯನ್ನು ಅರಿತಿರುವವರು ಕೇಂದ್ರದ ಬಿಜೆಪಿಯ ಸುಳ್ಳುಗಳನ್ನು ನಂಬಲು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಇವರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.  ಬಸವಾದಿ ಶರಣರ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಕರೆ ನೀಡಿದರು.

ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣತೆ ನಮಗೆ, ನಿಮಗೆ ಮಾದರಿಯಾಗಲಿ ಎಂದು ನೆರೆದಿದ್ದ ಜನಸ್ತೋಮಕ್ಕೆ ಮುಖ್ಯಮಂತ್ರಿಗಳು ಕರೆ ನೀಡಿದರು.

ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು, ಈಗ ನಮ್ಮದೇ ಗ್ಯಾರಂಟಿಗಳನ್ನು ಕಾಪಿ ಮಾಡಿ ಅದಕ್ಕೆ, “ಮೋದಿ ಗ್ಯಾರಂಟಿ” ಎಂದು ಹೆಸರಿಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ವ್ಯಂಗ್ಯವಾಡಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್, ಕ್ರೀಡಾ ಮತ್ತು ಯುವಜನ ಸಭಲೀಕರಣ ಸಚಿವ ನಾಗೇಂದ್ರ, ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ, ಶಾಸಕರುಗಳಾದ ಈ. ತುಕಾರಾಮ್, ಕಂಪ್ಲಿ ಗಣೇಶ್, ಲತಾ ಮಲ್ಲಿಕಾರ್ಜುನ್, ರಾಘವೇಂದ್ರ ಹಿಟ್ನಾಳ್ , ನಾರಾ ಭರತ್ ರೆಡ್ಡಿ  ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

 

 

Related