ಸಮಾವೇಶದಲ್ಲಿ ಕೇಸರಿಮಯವಾದ ಜಿಲ್ಲೆ

ಸಮಾವೇಶದಲ್ಲಿ ಕೇಸರಿಮಯವಾದ ಜಿಲ್ಲೆ

ಬೆಳಗಾವಿ : ಬಿಜೆಪಿಯಿಂದ ನಾಳೆ ಮಧ್ಯಾಹ್ನ 3ಕ್ಕೆ ಆಯೋಜಿಸಿರುವ ಜನಸೇವಕ ಸಮಾವೇಶ ಸಮಾರೋಪ’ಕ್ಕೆ ಇಲ್ಲಿನ ಜಿಲ್ಲಾ ಕ್ರೀಡಾಂಗಣ ಸಜ್ಜಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಸಂಪುಟದ ಬಹುತೇಕ ಸದಸ್ಯರು, ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ನೂರಾರು ಗಣ್ಯರು, ಸಹಸ್ರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕೋವಿಡ್-19 ಕಾಣಿಸಿಕೊಂಡ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಬೃಹತ್ ಸಮಾವೇಶ ಇದಾಗಿದೆ.

ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ರಸ್ತೆ ವಿಭಜಕಗಳಲ್ಲಿ ಆ ಪಕ್ಷದ ಬಾವುಟಗಳು, ನಾಯಕರ ಕಟೌಟ್‌ಗಳು ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿವೆ. ರಾಣಿ ಚನ್ನಮ್ಮ ವೃತ್ತದಲ್ಲಿರುವ ಪ್ರತಿಮೆಯ ಸ್ಥಳವನ್ನೂ ಬಿಜೆಪಿಯ ಬಾವುಟದ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿದೆ.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಲೋಕಸಭಾ ಕ್ಷೇತ್ರದ ಉಪ ಚುನಾವಣೆ, ನಗರಪಾಲಿಕೆ, ಜಿಲ್ಲಾ ಹಾಗೂ ತಾ.ಪಂ ಚುನಾವಣೆ ಮೇಲೆ ಕಣ್ಣಿಟ್ಟು ಸಮಾವೇಶ ಆಯೋಜಿಸಲಾಗಿದೆ.

ಪಕ್ಷದ ವರಿಷ್ಠರಲ್ಲಿ ಒಬ್ಬರಾದ ಅಮಿತ್ ಶಾ ಬರುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ. ರಮೇಶ ಜಾರಕಿಹೊಳಿ ಅವರು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇಲ್ಲಿ ನಡೆಯುತ್ತಿರುವ ಪಕ್ಷದ ದೊಡ್ಡ ಮಟ್ಟದ ಸಮಾವೇಶ ಇದಾಗಿರುವುದರಿಂದ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ‘3-4 ಲಕ್ಷ ಮಂದಿ ಸೇರಿಸುತ್ತೇವೆ. ಅಭೂತಪೂರ್ವ ಯಶಸ್ಸು ಸಿಗುವಂತೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಕೋವಿಡ್-19 ಭೀತಿಯ ನಡುವೆಯೂ ಸಹಸ್ರಾರು ಮಂದಿಯನ್ನು ಸೇರಿಸಿ ಸಮಾವೇಶ ನಡೆಸುತ್ತಿರುವುದಕ್ಕೆ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿದವರೆ ಅದನ್ನು ಉಲ್ಲಂಘಿಸುತ್ತಿದ್ದಾರೆ. ಬಿಜೆಪಿಯವರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ದೂರಿದ್ದಾರೆ.

Related