ಸರ್ಕಾರ ವಿರುದ್ದ ತೆಜಸ್ವಿ ಸೂರ್ಯ ಅಕ್ರೋಶ

ಸರ್ಕಾರ ವಿರುದ್ದ ತೆಜಸ್ವಿ ಸೂರ್ಯ ಅಕ್ರೋಶ

ಬೆಂಗಳೂರು,ಸೆ.29: ತಮಿಳುನಾಡಿಗೆ ಇದೇ ರೀತಿ ನೀರನ್ನು ಬಿಡುಗಡೆ ಮಾಡುತ್ತಿದ್ದರೆ ಮುಂದೆ ಬೆಂಗಳೂರಿನ ಜನಕ್ಕೆ ಕುಡಿಯಲು ನೀರಿರಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ಪರಿಸ್ಥಿತಿಯನ್ನು ಪ್ರಸ್ತುತಪಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಸಂಸದರ ಮೇಲೆ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬೇಡ ಎಂದು ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ಕೊಳ್ಳದ ರೈತರ ಬೆನ್ನಿಗೆ ಬಿಜೆಪಿ ನಿಂತಿದ್ದು, ಕರ್ನಾಟಕ ಬಂದ್ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರ ಸಿಡಬ್ಲ್ಯೂಎಂಎ ಮುಂದೆ ರಾಜ್ಯದ ವಸ್ತುಸ್ಥಿತಿಯನ್ನು ಪ್ರಸ್ತುತಪಡಿಸಲು ವಿಫಲರಾಗಿದ್ದಾರೆ. ಇದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತೆ ಮಾಡಿದ್ದಾರೆ ಕಿಡಿಕಾರಿದರು.

ನಾಡು, ನುಡಿ, ಜಲ ವಿಚಾರದಲ್ಲಿ ನಾವು ರಾಜಕೀಯ ಮಾಡಬಾರದು ಎಂದು ಎಷ್ಟೇ ಎಂದುಕೊಂಡರು ಕೂಡ ರಾಜ್ಯದಲ್ಲಿರುವ ಆಡಳಿತಾರೂಢ ಸರ್ಕಾರ ತನ್ನ ವಿಫಲತೆಯನ್ನು ಮರೆತು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ.

ರಾಜ್ಯದಲ್ಲಿ ಈ ವರ್ಷ ಶೇ.60ರಷ್ಟು ಮಳೆ ಕೊರತೆಯಾಗಿದೆ. ಕಾವೇರಿ ಕೊಳ್ಳದ 32 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ನಮಗೆ ಮುಂಗಾರಿನಲ್ಲಿ ಮಾತ್ರ ಮಳೆ ಬರುತ್ತದೆ. ತಮಿಳುನಾಡಿನಲ್ಲಿ ಮುಂಗಾರು, ಹಿಂಗಾರು, ನೈರುತ್ಯ ಮಾರುತಗಳಲ್ಲಿಯೂ ಮಳೆ ಬರುತ್ತದೆ. ಅಕ್ಟೋಬರ್, ನವೆಂಬರ್ನಲ್ಲಿ ತಮಿಳುನಾಡಿನಲ್ಲಿ ಮಳೆಯಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಕಾರದ ಮುಂದೆ ಈ ಅಂಶವನ್ನು ಪ್ರಸ್ತುತಪಡಿಸುವಲ್ಲಿ ಪ್ರತಿ ಬಾರಿಯೂ ವಿಫಲವಾಗಿದೆ ಎಂದರು.

ಕಾವೇರಿ ನದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕದ ಪರ ಎಂದಿಗೂ ಇದೆ. 2018ರಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದರಿಂದ ಕರ್ನಾಟಕಕ್ಕೆ 14.75 ಟಿಎಂಸಿ ನೀರನ್ನು ತಮಿಳುನಾಡಿನಿಂದ ಕಡಿತಗೊಳಿಸಿ ನೀಡಲಾಯಿತು. ಸಿಡಬ್ಲ್ಯೂಎಂಎ ಸಭೆಗಳಲ್ಲಿ ರಾಜ್ಯ ಸರ್ಕಾರದ ವಾದಕ್ಕೆ ಕೇಂದ್ರ ಸರ್ಕಾರದ ಪ್ರತಿನಿಗಳು ದನಿಗೂಡಿಸಿದ್ದಾರೆ. ಇದರ ಹಿಂದೆ ರಾಜ್ಯದ 25 ಸಂಸದರ, ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಅವರ ಪ್ರಯತ್ನ ಇದೆ. ಆದರೆ, ಇವರು ಸಂಸದರು ಏನು ಮಾಡಿಲ್ಲ ಅಂತಾರೆ ಎಂದು ಕಿಡಿಕಾರಿದರು.

Related