ಬಿಬಿಎಂಪಿ: ನಾಳೆಯಿಂದ ಬೀದಿ ನಾಯಿಗಳ ಸಮೀಕ್ಷೆ

  • In State
  • July 10, 2023
  • 135 Views
ಬಿಬಿಎಂಪಿ: ನಾಳೆಯಿಂದ ಬೀದಿ ನಾಯಿಗಳ ಸಮೀಕ್ಷೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಶುಪಾಲನಾ ವಿಭಾಗದಿಂದ ಬೀದಿ ನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭಿಸಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ಪ್ರಾಣಿಜನ್ಯ ರೋಗವಾದ ರೇಬೀಸ್ ರೋಗವನ್ನು ತಡೆಗಟ್ಟಲು ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕರ‍್ಯಕ್ರಮವನ್ನು ಪಾಲಿಕೆಯ ಪಶುಪಾಲನಾ ವಿಭಾಗದಿಂದ ಕೈಗೊಳ್ಳಲಾಗಿರುತ್ತದೆ. ಈ ಪೈಕಿ 2019ನೇ ಸಾಲಿನಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಮಾಡಿದ್ದು, 3.10 ಲಕ್ಷ ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿರುತ್ತದೆ.

ಮುಂದುವರಿದು, ಪಾಲಿಕೆಯ 08 ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯಕ್ರಮವನ್ನು 2019ನೇ ಸಾಲಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ವಿ ಅನುಷ್ಟಾನದ ಬಗ್ಗೆ ತಿಳಿಯುವ ಸಲುವಾಗಿ ಬೀದಿನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭಿಸಲಾಗುತ್ತಿದೆ.

ಬೀದಿನಾಯಿಗಳ ಸಮೀಕ್ಷೆಯು ಡಾ: ಕೆ.ಪಿ.ಸುರೇಶ್, ಪ್ರಧಾನ ವಿಜ್ಞಾನಿಗಳು  ICAR-NIVEDI, ಡಾ: ಹೇಮಾದ್ರಿ ದಿವಾಕರ್, ಪ್ರಧಾನ ವಿಜ್ಞಾನಿಗಳು, ICAR-NIVEDI, ಡಾ: ಶ್ರೀಕೃಷ್ಣ ಇಸ್ಲೂರು, ಪ್ರಾಧ್ಯಾಪಕರು, ಸೂಕ್ಷ್ಮಾಣು ಜೀವಿ ಶಸ್ತ್ರ ವಿಭಾಗ, ವೆಟರಿನರಿ ಕಾಲೇಜು, ಬೆಂಗಳೂರು, ಡಾ: ಬಾಲಾಜಿ ಚಂದ್ರಶೇಖರ್, ಮ್ಯಾನೇಜರ್ ಆಪರೇಷನ್, WVS ಸಂಸ್ಥೆ ಮತ್ತು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ನಗರ ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿಯ ಸಹಯೋಗದೊಂದಿಗೆ ನಡೆಯಲಿದೆ.

 

Related