ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 8 ನೇ ಘಟಿಕೋತ್ಸವ

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 8 ನೇ ಘಟಿಕೋತ್ಸವ

ಬಳ್ಳಾರಿ : ಸಾಮರ್ಥ್ಯವನ್ನು ಆಧುನಿಕ ಕಾಲದ ನಿರೀಕ್ಷೆಗೆ ತಕ್ಕಂತೆ ನವೀಕರಿಸಿಕೊಳ್ಳುವುದೇ ಯಶಸ್ಸಿನ ದಾರಿ’ ಎಂದು ಯುಜಿಸಿ ಕಾರ್ಯದರ್ಶಿ ಪ್ರೊ. ರಜನೀಶ್ ಜೈನ್ ಪ್ರತಿಪಾದಿಸಿದರು.
ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 8 ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಸಾಮರ್ಥ್ಯಗಳು ಸಕಾರಾತ್ಮಕ ಮನೋಭಾವ, ಸ್ಥಳೀಯ ಕೌಶಲ್ಯಗಳು ಹಾಗೂ ಮಾನವೀಯ ಮೌಲ್ಯಗಳ ಸಂಗಮ. ಈ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ಹೊಳೆಯುವ ನಕ್ಷತ್ರಗಳಿದ್ದಂತೆ. ಪ್ರತಿಯೊಬ್ಬರಲ್ಲಿಯೂ ನಿರ್ದಿಷ್ಟ ರಂಗದಲ್ಲಿ ಅತ್ಯುತ್ಕೃಷ್ಟವಾಗಿ ಪರಿಶ್ರಮ ತೋರುವ ಸಾಮರ್ಥ್ಯವಿದೆ. ಕಾಲ ಕಾಲಕ್ಕೆ ಅದನ್ನು ನವೀಕರಿಸಿದರೆ ಮಾತ್ರ ತೀವ್ರ ಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಪ್ರಪಂಚದಲ್ಲಿ ಯಶಸ್ಸು ಕಾಣಬಹುದು. ಇಲ್ಲವಾದಲ್ಲಿ ಎಲ್ಲರಿಗಿಂತಲೂ ಹಿಂದುಳಿಯಬೇಕಾಗುತ್ತದೆ’ ಎಂದು ಹೇಳಿದರು.

ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯ ಮೂಲಕ ದೇಶೀ ಜ್ಞಾನ ವ್ಯವಸ್ಥೆಯ ಮುಂದೆ ಬಹುತೇಕ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳು ಸೃಷ್ಟಿಯಾಗುತ್ತಿವೆ. ಆದರೆ ಸ್ಥಳೀಯ ಕುಶಲಗಾರರು, ಉದ್ಯಮಿಗಳು ಜಾಗತಿಕ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ತಮ್ಮ ಸಾಮರ್ಥ್ಯವನ್ನು ನವೀಕರಿಸಿಕೊಳ್ಳದೇ ಇರುವುದು ಸದ್ಯದ ದೊಡ್ಡ ಕೊರತೆಯಾಗಿದೆ’ ಎಂದು ವಿಷಾದಿಸಿದರು.
ಹೊಸತನ ಹಾಗೂ ಸೃಜನಶೀಲತೆ ಪ್ರತಿಯೊಬ್ಬರಲ್ಲೂ ಇರಲೇಬೇಕಾದ ಕೌಶಲ್ಯಗಳು. ಅವು ಸಮಯ ಹಾಗೂ ಪ್ರದೇಶಗಳನ್ನು ಮೀರಿದ್ದು. ಇವೆರಡೂ ಇರುವವರು ಯಾವುದೇ ಸಮೂಹದಲ್ಲಿದ್ದರೂ ವಿಭಿನ್ನರಾಗಿ ಕಾಣುತ್ತಾರೆ ಎಂದರು.

‘ಜಾಗತಿಕ ಮಟ್ಟದಲ್ಲಿ ವ್ಯಕ್ತಿಯು ತಂಡದಲ್ಲಿರುವಾಗ ಹೇಗೆ ವರ್ತಿಸಬೇಕು, ನಿರ್ಣಾಯಕವಾಗಿ ಆಲೋಚಿಸುವುದು ಹೇಗೆ, ವೈಜ್ಞಾನಿಕ ಚಿಂತನೆಯನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿವಿಧ ತರಬೇತಿಗಳನ್ನು ಈಗ ನೀಡಲಾಗುತ್ತಿದೆ. ಯುಜಿಸಿ ಕೂಡ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡುತ್ತಿದ್ದು, ಉನ್ನತ ಶಿಕ್ಷಣವನ್ನು ಸಬಲಗೊಳಿಸಲು ನಿರಂತರ ಪ್ರಯತ್ನ ನಡೆಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯೂ ಕಲಿಕೆ ಮತ್ತು ಬದುಕನ್ನು ಸಮಗ್ರವಾಗಿ ಗ್ರಹಿಸಿ ಪಠ್ಯಕ್ರಮಗಳನ್ನು ರೂಪಿಸಲು ನೆರವಾಗಲಿದೆ’ ಎಂದರು.

ದೈಹಿಕ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು.ಎಲ್ಲ ಬಗೆಯ ಸಂಬಂಧಗಳನ್ನು  ಗೌರವಿಸಬೇಕು. ಆ ಮೂಲಕವೇ ತಮ್ಮ ಪ್ರಯತ್ನಗಳನ್ನು ಹೆಚ್ಚು ಫಲಪ್ರದವಾಗಿ ಮಾಡಿಕೊಳ್ಳಬೇಕು. ಅದಕ್ಕಾಗಿ ಸತ್ಯ, ಸಮರ್ಥತೆ, ಸಂಕಲ್ಪ, ಸಂಯಮ ಮತ್ತು ಸಂವೇದನಾ ಶೀಲತೆಯ ದಾರಿಯಲ್ಲಿ ಕಡ್ಡಾಯವಾಗಿ ನಡೆಯಬೇಕು’ ಎಂದು ಸಲಹೆ ನೀಡಿದರು.

Related