ಸಿಲಿಕಾನ್ ಸಿಟಿ : ಸಾವಿನ ಸಂಖ್ಯೆ ಹೆಚ್ಚಳ

ಸಿಲಿಕಾನ್ ಸಿಟಿ : ಸಾವಿನ ಸಂಖ್ಯೆ ಹೆಚ್ಚಳ

ಬೆಂಗಳೂರು : ಕೊರೋನಾ ವೈರಸ್ ಲಕ್ಷಣಗಳ ಕುರಿತು ಜನರು ನಿರ್ಲಕ್ಷ್ಯ ತೋರುತ್ತಿದ್ದು, ಅಂತಿಮ ಕ್ಷಣಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ 12 ದಿನಗಳಲ್ಲಿ ಬೆಂಗಳೂರು ನಗರ ವೊಂದರಲ್ಲಿಯೇ 19 ಮಂದಿ ವೈರಸ್’ಗೆ ಬಲಿಯಾಗಿದ್ದಾರೆ. ಇದರಲ್ಲಿ ಶುಕ್ರವಾರ 23 ವರ್ಷದ ಯುವಕ ಕೂಡ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ವೈರಸ್‌ಗೆ ಬಲಿಯಾದವರ ಪೈಕಿ ಈ ಯುವಕ ಅತ್ಯಂತ ಕಿರಿಯವನಾಗಿದ್ದಾನೆ.  ಭಾನುವಾರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದ ರಾಜ್ಯ ಆರೋಗ್ಯ ಇಲಾಖೆಯು, ರಾಜ್ಯದಲ್ಲಿ ಈ ವರೆಗೂ 81 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 29 ಪ್ರಕರಣಗ ಬೆಂಗಳೂರು ನಗರದ್ದಾಗಿದೆ ಎಂದು ತಿಳಿಸಿದೆ.

ಐಎಲ್‌ಐ ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತಿದೆ. ಲಕ್ಷಣಗಳು ಕಂಡು ಬಂದರೂ ಜನರು ಸ್ವತಃ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವೈರಸ್ ಲಕ್ಷಣಗಳು ಗಂಭೀರವಾದ ಬಳಿಕ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ನಾಲ್ಕು ದಿನಗಳಿಂಗ ನಾವು ಗಮನಹರಿಸಿರುವ ಪ್ರಕಾರ, ಆಸ್ಪತ್ರೆಗೆ ದಾಖಲಾಗಿರುವ ಬಹುತೇಕ 60 ವರ್ಷದ ಮೇಲ್ಪಟ್ಟವರು ವ್ಯಕ್ತಿಗಳು ಲಕ್ಷಣಗಳನ್ನು ಆರಂಭದಲ್ಲಿ ನಿರ್ಲಕ್ಷಿಸಿದ್ದಾರೆ. ಸಾಮಾನ್ಯವಾದ ಶೀತವೆಂದು ಭಾವಿಸಿದ್ದಾರೆ. ಇಂತಹ ವ್ಯಕ್ತಿಗಳು ಬಂದ ಕೂಡಲೇ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಮಾಹಿತಿ ನೀಡಿ, ಪರೀಕ್ಷೆಗೊಳಪಡಿಸುವ ಕೆಲಸ ಮಾಡಬೇಕೆಂದು ರಾಜೀವ್ ಗಾಂದಿ ಆರೋಗ್ಯ ವಿವಿಯ ಉಪ ಕುಲಪತಿ ಡಾ. ಸಚಿದಾನಂದ ಅವರು ಹೇಳಿದ್ದಾರೆ.

ವಯಸ್ಸು ಪ್ರಮುಖ ವಿಚಾರವಲ್ಲ, ಸಾರಿ ಹಾಗೂ ಐಎಲ್‌ಐ ಲಕ್ಷಣಗಳಿರುವ ಜನರು ವೈರಸ್‌ಗೆ ತುತ್ತಾಗುತ್ತದೆ. ಬೆಂಗಳೂರು ಜನತೆಯಲ್ಲಿ ಜೀವನ ಶೈಲಿಯ ಸಮಸ್ಯೆಯಿದೆ. ಅತೀ ಹೆಚ್ಚು ಜನರಲ್ಲಿ ಬೊಜ್ಜು, ರಕ್ತದದೊತ್ತಡ, ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನೂ ಕೂಡ ನಾವು ಗಣನೆಗೆ ತೆಗೆದುಕೊಳ್ಳಬೇಕು ಎಂದು ಡಾ.ನಾಗರಾಜ್ ಸಿ ತಿಳಿಸಿದ್ದಾರೆ.

Related