ಮನೆ ಮನೆಗೆ ಚರಂಡಿ ನೀರು..?

  • In State
  • October 26, 2023
  • 130 Views
ಮನೆ ಮನೆಗೆ ಚರಂಡಿ ನೀರು..?

ಹೊಸಪೇಟೆ: ತಾಲೂಕಿನ ನಗರಸಭೆ ವ್ಯಾಪ್ತಿಗೆ ಬರುವ 22ನೇ ವಾರ್ಡಿನ ಗವಿಸಿದ್ದೇಶ್ವರ ನಗರದಲ್ಲಿ ಒಳಚರಂಡಿ ತುಂಬಿ ರಸ್ತೆ ತುಂಬಾ ಹರಿಯುವುದಲ್ಲದೆ ಮನೆ ಬಾಗಿಲಿಗೆ ಬರುತ್ತದೆ. ಈ ದುರ್ವಾಸನೆಯಿಂದ ನಮಗೆ ಊಟ ಸಹ ಮಾಡಲಾಗುವುದಿಲ್ಲ, ಮೊನ್ನೆ ತಾನೆ ನಮ್ಮ ಮಗನಿಗೆ ವಿಪರೀತ ಜ್ವರ ಬಂದು ಮಗನನ್ನು ಆಸ್ಪತ್ರೆಗೆ ತೋರಿಸಿ ಮನೆಗೆ ಕರೆ ತಂದಿದ್ದೇನೆ ಎಂದು ಬಾವೋದ್ರೇಕವಾಗಿ ಸ್ಥಳೀಯರಾದ ಮೆಹಬೂಬ್ ಸಾಬ್ ಹೇಳಿದರು.

ಇನ್ನು ಈ ಒಳಚರಂಡಿ ಕಾಮಗಾರಿ 2022- 23ನೇ ಸಾಲಿನಲ್ಲಿ ನಗರೋತ್ತಾನದ ಅನುದಾನದಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಟೆಂಡರ್ ಆಗಿದೆ. ಈ ಟೆಂಡರ್ ಪಡೆದ ಗುತ್ತಿಗೆದಾರ ಕಳಪೆ ಮಟ್ಟದ ಕಾಮಗಾರಿಯನ್ನು ಮಾಡಿದ್ದಾನೆಂದು ಅಲ್ಲಿನ ಮಂದಿ ಆರೋಪಿಸಿದ್ದಾರೆ.

ಕಾರಣ ಈ ಚರಂಡಿನೀರು ಹರಿದು ಹೋಗುವ ಪೈಪ್ ನಿಂದ ಇನ್ನೊಂದು ಚರಂಡಿ ಪೈಪಿಗೆ ಕನೆಕ್ಷನ್ ನೀಡದೆ ಹಾಗೆ ಬಿಟ್ಟಿರುವುದರಿಂದ ಚರಂಡಿ ಬ್ಲಾಕ್ ಆಗಿ ಚೇಂಬರ್ ಮೇಲೆ ಮಲ ಮತ್ತು ಚರಂಡಿ ನೀರು ರಸ್ತೆಯ ಮೇಲೆ ಬಂದು ಕೆಲವು ಮನೆಯ ಬಾಗಿಲುವರೆಗೂ ಕೂಡ ಬರುತ್ತವೆ. ಈ ಮಲತುಂಬಿದ ನೀರಿನ ದುರ್ವಾಸನೆಯಿಂದ ಜನ ರೋಸಿ ಹೋಗಿದ್ದಾರೆ.

ಈ ಸಂಬಂಧ ಇಲ್ಲಿನ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಇದಲ್ಲದೆ ಈ ಚರಂಡಿಯ ಪಕ್ಕದಲ್ಲಿ ಕೇವಲ 50 ಮೀಟರ್ ದೂರದಲ್ಲಿ ರಾಣಿ ಚೆನ್ನಮ್ಮ ಸರ್ಕಾರಿ ಶಾಲೆ ಇದ್ದು, ಶಾಲೆಗೆ ಹೋಗಿ ಬರುವ ಮಕ್ಕಳು ಕೆಲವೊಮ್ಮೆ ಹರಸಾಹಸ ಪಡುತ್ತಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ 22ನೇ ವಾರ್ಡಿನ ನಗರಸಭೆಯ ಸದಸ್ಯನಿಗೆ ಮತ್ತು ಅಧಿಕಾರಿಗಳಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ನಗರ ಸಭೆಯ ಕಮಿಷನರ್ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕೂಡಲೇ ಈ ಕೆಲಸವನ್ನು ಪೂರ್ಣಗೊಳಿಸುತ್ತೇನೆ ಎಂದು ಅಲ್ಲಿಯ ಜನರಿಗೆ ಆಶ್ವಾಸನೆ ನೀಡಿದ್ದಾರೆ.

ವರದಿಗಾರ ಎ ಚಿದಾನಂದ, ವಿಜಯನಗರ

Related