ಬಿಸಿ ಊಟ ತಯಾರಿಸಲು ನೀರಿಲ್ಲದೆ ಪರದಾಟ

  • In State
  • October 26, 2023
  • 136 Views
ಬಿಸಿ ಊಟ ತಯಾರಿಸಲು ನೀರಿಲ್ಲದೆ ಪರದಾಟ

ಮರಿಯಮ್ಮನಹಳ್ಳಿ: ಹೋಬಳಿಯ ಡಣನಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಇಂದಿರಾ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರ್ಧವಾರ್ಷಿಕ ರಜೆ ಮುಗಿಸಿಕೊಂಡು ಶಾಲೆ ಪ್ರಾರಂಭವಾಗುತ್ತಿದ್ದಂತೆ ನೀರಿನ ಕೊರತೆ ಕಂಡು ಬಂದಿದೆ.

ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ 101 ಮಕ್ಕಳಿದ್ದು ಅಕ್ಟೋಬರ್  25 ರಿಂದ ತರಗತಿ ಶುರುವಾಗಿದ್ದು, ಮಕ್ಕಳಿಗೆ ಅಡುಗೆ ಮಾಡಲು, ಮತ್ತು ಕುಡಿಯಲು  ಶಾಲೆಯಲ್ಲಿ ನೀರಿಲ್ಲದಂತಾಗಿದೆ. ಇಂದಿರಾನಗರಕ್ಕೆ 15 ದಿನಗಳಿಂದ ನೀರಿನ ಸಂಪರ್ಕ ಕಡಿತವಾಗಿದೆ, ಹಾಗಾಗಿ ಶಾಲೆ ತೆರೆದ ಸಂದರ್ಭದಲ್ಲಿ ಶಾಲೆಗೂ ಸಹ ನೀರಿಲ್ಲದಂತಾಗಿದೆ. ಅಡುಗೆ ಮಾಡಲಿಕ್ಕಾಗಿ ಅಡುಗೆಯವರು ಎರಡು ದಿನ ಹೊರಗಡೆಯಿಂದ ನೀರನ್ನು ತಂದು ಅಡುಗೆ ಮಾಡಿ ಮಕ್ಕಳಿಗೆ ಉಣ ಬಡಿಸಿದ್ದಾರೆ. ಈ ಬಗ್ಗೆ ಮುಖ್ಯ ಗುರುಗಳಾದ ಗುರುವಪ್ಪ ಅವರು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ನೀರೊದಗಿಸಲು ಲಿಖಿತ ರೂಪದಲ್ಲಿ ಪತ್ರವನ್ನು ಸಲ್ಲಿಸಿದ್ದಾರೆ. ಇನ್ನುಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಲೆ ತೆರೆದು ಎರಡು ದಿನಗಳಾಗಿದೆ ಮಕ್ಕಳಿಗೆ ಅಡುಗೆ ಮಾಡಲು ಕುಡಿಯಲಿಕ್ಕೆ ನೀರಿಲ್ಲ. ಇದೇ ರೀತಿ ಮುಂದುವರೆದರೆ ಅಡುಗೆಗೆ ತುಂಬಾ ಸಮಸ್ಯೆ ಆಗುತ್ತದೆ, ನಗರದಲ್ಲಿ ನೀರಿನ ಸಂಪರ್ಕ ನಿಂತು 15 ದಿನಗಳಾಗಿವೆ ಎಂದು ಗಮನಕ್ಕೆ ಬಂದಿದೆ ಹಾಗಾಗಿ ಪಂಚಾಯತಿ ಅಧಿಕಾರಿಗಳಿಗೆ ನೀರು ಒದಗಿಸಲು ಪತ್ರವನ್ನು ಬರೆದಿದ್ದೇನೆ, ಅಧಿಕಾರಿಗಳು ಕೂಡಲೇ ಒಡೆದಿರುವ ಪೈಪುಗಳನ್ನು ಸರಿಪಡಿಸಿ ನೀರು ಕೊಟ್ಟರೆ ಆಗಿರುವ ಸಮಸ್ಯೆ ನಿಲ್ಲುತ್ತದೆ ಎಂದರು.

ಕುಡಿಯುವ ನೀರಿನ ರೈಸಿಂಗ್ ಪೈಪ್ ನಲ್ಲಿ ಸ್ವಲ್ಪ ಸಮಸ್ಯೆಗಳಿವೆ.  ಅವುಗಳನ್ನು ಸರಿಪಡಿಸಿ ನಾಳೆ ಪ್ರತ್ಯೇಕ ಮೊಟರನ್ನು ಅಳವಡಿಸಿ ಶಾಲೆಗೆ ಪೈಪ್ ಹಾಕಿಸಿ ಕೊಡುತ್ತೇವೆ ಎಂದು ಜಿಲಾನ್, ಡಣನಾಯಕನ ಕೆರೆ ಗ್ರಾಮದ ಪಿ ಡಿ ಓ  ಹೇಳಿದರು.

ವರದಿ, ಮಂಜುನಾಥ್  ಲಕ್ಕಿಮರ( ವಿಜಯನಗರ )

Related