ಶಾಸಕರ ಅನುದಾನದ ಅಡಿಯಲ್ಲಿ ಹಣ ಬಿಡುಗಡೆ

ಶಾಸಕರ ಅನುದಾನದ ಅಡಿಯಲ್ಲಿ ಹಣ ಬಿಡುಗಡೆ

ಅಣ್ಣಿಗೇರಿ : ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಹಂತ ಹಂತವಾಗಿ ಹೆಚ್ಚುತ್ತಿರುವ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ತಾಲ್ಲೂಕಾಡಳಿತ ಸರ್ವ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನಗರದ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಮಾತನಾಡಿ, ಸಾರ್ವಜನಿಕರು ಸರ್ಕಾರದ ಜೊತೆ ಕೈ ಜೋಡಿಸಿದಾಗ ಮತ್ತು ಸರ್ಕಾರ ಹಾಕಿರುವ ಮಾನದಂಡಗಳನ್ನು ಪಾಲಿಸಿದಾಗ ಮಾತ್ರ ಕೊರೋನಾ ಸೋಂಕು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ತಾಲೂಕಿನಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಶಾಸಕರ ನಿಧಿಯಲ್ಲಿ 10 ಲಕ್ಷ ರೂ. ಅನುದಾನವನ್ನು ತಹಶೀಲ್ದಾರ್ ಖಾತೆಗೆ ಜಮಾ ಮಾಡಲಾಗಿದೆ. ಹಾಗೂ ಇನ್ನೂ ಹೆಚ್ಚಿನ ಆಕ್ಸಿಜನ್ ಅಗತ್ಯ ಇದ್ದಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಮಾಡಲು ಸಿದ್ಧ ಎಂದು ಹೇಳಿದರು.

ಅಲ್ಲದೆ ಕ್ಷೇತ್ರದ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಗರದ ದೇವರಾಜ ಅರಸು ಬಾಲಕಿಯರ ವಸತಿ ನಿಲಯದಲ್ಲಿ ಭಾನುವಾರದಿಂದ 60 ಹಾಸಿಗೆ ಇರುವ ಕೋವಿಡ್ ಸೆಂಟರನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಕಾಂಬಳೆ ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ಬಡಜನರಿಗೆ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ನೀಡಲಾಗಿದೆ. ಗಂಡು-ಹೆಣ್ಣಿಗೆ 289 ರೂ. ಸಮಾನ ಕೂಲಿ ಇರುತ್ತದೆ ಎಂದು ಹೇಳಿದರು.

ಬಳಿಕ ಆರೋಗ್ಯ ಅಧಿಕಾರಿ ಎಸ್.ಎಂ. ಹೊನಕೇರಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸಬೇಕು ಮತ್ತು ಮುಖ್ಯ ಅಧಿಕಾರಿ ಕೆ.ಎಫ್.ಕಟಗಿ ಮಾತನಾಡಿ, ಕೊರೋನಾ ತಡೆಗಟ್ಟಲು ಸರ್ಕಾರ ಹೊರಡಿಸಿರುವ ನಿಯಮಗಳು ಪಾಲನೆ ಮಾಡುವಂತೆ ಆಶಾ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರಿಂದ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಪಿಎಸ್‌ಐ ಲಾಲಸಾಬ ಜೂಲಕಟ್ಟಿ ಮಾತನಾಡಿ, ಇಲ್ಲಿಯವರೆಗೆ 600 ಕೇಸುಗಳನ್ನು ಮಾಡಿರುತ್ತೇವೆ ಹಾಗೂ ಭದ್ರತೆಗಾಗಿ ಹೆಚ್ಚುವರಿ ಹೋಂಗಾರ್ಡ್ ಸನ್ನು ಏರ್ಪಾಡು ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಿಶೀಲ್ದಾರ್ ಕೊಟ್ರೇಶ್ ಗಾಳಿ, ಷಣ್ಮುಖ ಸುರಕೋಡ, ಶಿವಯೋಗಿ ಸುರಕೋಡ, ಡಾ. ಅಶೋಕ್ ಅಗರವಾಲ, ಶಿವಾನಂದ ಹೊಸಳ್ಳಿ ಹಾಗೂ ಮತ್ತಿತರ ಉಪಸ್ಥಿತರಿದ್ದರು.

Related