ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸಿ ಸಂವಿಧಾನ ವಿರೋಧಿಸುವ BJP-RSS ಅನ್ನು ತಿರಸ್ಕರಿಸಿ: ಸಿಎಂ

ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸಿ ಸಂವಿಧಾನ ವಿರೋಧಿಸುವ BJP-RSS ಅನ್ನು ತಿರಸ್ಕರಿಸಿ: ಸಿಎಂ

ಚಿತ್ರದುರ್ಗ: ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ ಸಂವಿಧಾನ ವಿರೋಧಿ BJP-RSS ಅನ್ನು ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕರ್ನಾಟಕ ಶೋಷಿತ ಜಾತಿ-ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಚಿತ್ರದುರ್ಗದಲ್ಲಿ ಆಯೋಜಿಸಿದ್ದ “ಶೋಷಿತರ ಜಾಗೃತಿ ಸಮಾವೇಶವನ್ನು” ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ, ದಲಿತ ಮತ್ತು ಶೋಷಿತ ಜಾತಿ ಸಮುದಾಯಗಳ ಜನ ತಮ್ಮ ಶತ್ರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಶತ್ರುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಿಮ್ಮ ಸ್ವಾಭಿಮಾನ ಬೆಳೆಸಿಕೊಳ್ಳಿ ಎಂದು ಸೂಚಿಸಿದರು.

ಮಂಡಲ್ ವರದಿಯನ್ನು ಬಿಜೆಪಿ ಮತ್ತು RSS ವಿರೋಧಿಸುತ್ತಲೇ ಬಂದಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು BJP-RSS ನಿರಂತರವಾಗಿ ವಿರೋಧಿಸುತ್ತಲೇ ಇದೆ. ಆದ್ದರಿಂದ ಸಂವಿಧಾನ ಮತ್ತು ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳ ಕೈಗೆ ಅಧಿಕಾರ ಹೋಗಬಾರದು ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ನಾವು ಮರೆಯಬಾರದು ಎಂದರು.

ಬಾಬಾ ಸಾಹೇಬ್ ಅವರ ಸಂವಿಧಾನ ಇಲ್ಲದೇ ಹೋಗಿದ್ದರೆ ಕೆ.ಎಸ್.ಈಶ್ವರಪ್ಪ ಸಿ.ಟಿ.ರವಿ ಮತ್ತು ಆರ್.ಅಶೋಕ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಸಾಧ್ಯವೇ ಇರಲಿಲ್ಲ. ಯಾರದ್ದೋ ಹೊಲ ಗದ್ದೆಗಳಲ್ಲಿ ಕೂಲಿ ಮಾಡುತ್ತಾ ಕೂರಬೇಕಾಗಿತ್ತು ಎಂದು ಮುಖ್ಯಮಂತ್ರಿಗಳು ಟೀಕಿಸಿದರು.

ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿಬಿಟ್ಟೆ ಎನ್ನುವ ಕಾರಣಕ್ಕೆ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಮಧ್ಯಮ ವರ್ಗ ಮತ್ತು ಬಡವರಿಗೆ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದ್ದಕ್ಕೆ ನನ್ನನ್ನು ವಿರೋಧಿಸುತ್ತಿದ್ದಾರೆ.

ಅನ್ನ ಭಾಗ್ಯ, ಶೂ ಭಾಗ್ಯ, ಸಮವಸ್ತ್ರ ಭಾಗ್ಯ ಸೇರಿ ಸಾಲು ಸಾಲು ಅನುಕೂಲಗಳನ್ನು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಕಲ್ಪಿಸಿದೆ. ಇದಕ್ಕೇ ನನ್ನನ್ನು ವಿರೋಧಿಸುತ್ತಾರೆ. ಆದರೆ ನಾನು ಎದೆ ಗುಂದದೆ ನಿಮ್ಮ ಪರವಾಗಿ ಇರುತ್ತೇನೆ ಎಂದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಾವಳ್ಳಿ ಶಂಕರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಎಚ್.ಆಂಜನೇಯ, ಮಾಜಿ ಸಂಸದ ಉಗ್ರಪ್ಪ ಹಾಗೂ ಶಾಸಕರುಗಳಾದ ಪ್ರಕಾಶ್ ರಾಥೋಡ್, ನಾಗರಾಜ್ ಯಾದವ್, ಅಜಯ್ ಸಿಂಗ್, ನಸೀರ್ ಅಹಮದ್ ಸೇರಿ 20 ಕ್ಕೂ ಹೆಚ್ಚು ಶಾಸಕರುಗಳು ಉಪಸ್ಥಿತರಿದ್ದರು.

Related