ಮಳೆ ಅವಾಂತರಕ್ಕೆ 3 ಜನ ಸಾವು, 3 ಜಿಲ್ಲೆಗಳಿಗೆ ರೆಡ್ ಅಲರ್ಟ್.!

  • In Crime
  • July 8, 2022
  • 192 Views
ಮಳೆ ಅವಾಂತರಕ್ಕೆ 3 ಜನ ಸಾವು, 3 ಜಿಲ್ಲೆಗಳಿಗೆ ರೆಡ್ ಅಲರ್ಟ್.!

ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಭೂಕುಸಿತದಿಂದ ಮೂವರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಸಮೀಪದ ಕಜೆಬೈಲು ಗ್ರಾಮದಲ್ಲಿ ಬುಧವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಗ್ರಾಮದ ಮನೆಯೊಂದರ ಮೇಲೆ ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ನಿನ್ನೆ ರಾತ್ರಿ ಭೂಕುಸಿತ ಸಂಭವಿಸಿದ ನಂತರ ಜನರು ಮನೆಯೊಳಗೆ ಸಿಲುಕಿಕೊಂಡಿದ್ದರು.

ನಾಲ್ವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮೂವರನ್ನು ರಕ್ಷಿಸಿ ತುರ್ತು ಸೇವೆಗಳ ಮೂಲಕ ಸ್ಥಳೀಯ ಆಸ್ಪತ್ರೆಗೆ ಬುಧವಾರ ರಾತ್ರಿ ಸಾಗಿಸಲಾಯಿತು.
ಕಳೆದ ಕೆಲವು ದಿನಗಳಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ – ವಿಶೇಷವಾಗಿ ಕರಾವಳಿಯಲ್ಲಿ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯು ಜುಲೈ 7ರಂದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಕೊಡಗಿನಲ್ಲಿ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಹಾಸನ, ಹಾವೇರಿ, ಧಾರವಾಡ, ಗದಗ ಮತ್ತು ಕಲಬುರಗಿಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಇಲಾಖೆಯು ಜುಲೈ 6 ರಂದು ಎಲ್ಲಾ ಜಿಲ್ಲೆಗಳಲ್ಲಿ, ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು. ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ಪರಿಸ್ಥಿತಿ ಜುಲೈ 10ರವರೆಗೆ ಮುಂದುವರಿಯಬಹುದು ಎಂದು ಹವಾಮಾನ ನಿಗಾ ಸಂಸ್ಥೆ ತಿಳಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಬೆಳಗಾವಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

Related