ಜನಸೇವೆಯೇ ನನ್ನ ಗುರಿ: ಎಂ. ಸತೀಶ್ ರೆಡ್ಡಿ

ಜನಸೇವೆಯೇ ನನ್ನ ಗುರಿ: ಎಂ. ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಕೇವಲ ಚುನಾವಣೆ ವೇಳೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಮತ ಕೇಳಲು ನಾನು ಬಂದಿಲ್ಲವೆಂದು ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ನುಡಿದರು.

ಇಂದು ಪುಟ್ಟೇನಹಳ್ಳಿಯ ಶನಿದೇವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿ ಮಾತನಾಡಿದ ಎಂ. ಸತೀಶ್ ರೆಡ್ಡಿಯವರು, ಕಳೆದ 3 ಭಾರಿ ಶಾಸಕನಾಗಿ ಈ ಕ್ಷೇತ್ರದ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುವ ಸದಾವಕಾಶ ನೀಡಿದ್ದೀರಿ. ನಿಮ್ಮ ಮನೆ ಬಾಗಿಲಿಗೆ ನಾನು ಚುನಾವಣೆ ವೇಳೆ ಮಾತ್ರ ಬಂದಂತಹ ನಾಯಕನಲ್ಲ. ನಿಮಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು, ಮನೆ ನಿರ್ಮಿಸಿಕೊಳ್ಳಲು, ಕಾವೇರಿ ನೀರನ್ನು ನಿಮ್ಮ ಮನೆ ಮನೆಗಳಿಗೆ ನೀಡಲು, ಕಾಂಕ್ರೀಟ್ ರಸ್ತೆ ನಿರ್ಮಿಸಲು ನಿಮ್ಮ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಕಲ್ಪಿಸಲು ಸತತ 15 ವರ್ಷಗಳಿಂದ ಶ್ರಮಿಸಿದ್ದೇನೆ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಪಕ್ಷ ಈಗಾಗಲೇ ಕಳೆದ 3 ಚುನಾವಣೆಗಳಲ್ಲಿ ಪ್ರತಿ ಭಾರಿಯೂ ಹೊಸ ಮುಖವನ್ನು ತಂದು ಕೇವಲ ಚುನಾವಣೆ ಸಂದರ್ಭದಲ್ಲಿ ಇಲ್ಲ ಸಲ್ಲದ ಸುಳ್ಳು ಆಶ್ವಾಸನೆಗಳನ್ನು ನೀಡಿ ಮತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಭಾರಿಯೂ ಸಹ ಮತ್ತೊಬ್ಬ ಹೊಸ ಮುಖವನ್ನು ಅಖಾಡಕ್ಕಿಳಿಸಿ ಹಳೆ ಕುತಂತ್ರವನ್ನೇ ಎಣೆಯುತ್ತಿದೆ. ಕೊರೋನಾ ಸಂಕಷ್ಟದಲ್ಲಿ ಮನೆಯಲ್ಲಿ ಅಡಗಿ ಕುಳಿತಿದ್ದ ಕಾಂಗ್ರೆಸ್ಸಿಗರು ಇಂದು ಕ್ಷೇತ್ರದ ಜನತೆಗೆ ತಪ್ಪು ಮಾಹಿತಿ ನೀಡುವ ಮೂಲಕ ಚುನಾವಣೆಗೆ ಮಾತ್ರ ಸೀಮಿತ ಎಂಬುದನ್ನು ಸಾಬೀತು ಪಡಿಸಲು ಹೊರಟಿದ್ದಾರೆ. ಕ್ಷೇತ್ರದೆಲ್ಲೆಡೆ ಈಗಾಗಲೇ ಶೇ. 90 ರಷ್ಟು ಅಭಿವೃದ್ದಿ ಕರ‍್ಯಗಳನ್ನು ಮಾಡಿದ್ದು, ಮುಖ್ಯವಾಗಿ ಕೆರೆಗಳ ಅಭಿವೃದ್ದಿ, ಶಾಲೆಗಳ ಅಭಿವೃದ್ದಿ, ಸರ್ಕಾರಿ ಆಸ್ಪತ್ರೆಗಳ ನಿರ್ಮಾಣವನ್ನು ಮಾಡುವ ಮೂಲಕ ನಿರಂತರ ಜನಸೇವೆಯೇ ನನ್ನ ಗುರಿ ಎಂಬ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ಜನರೊಂದಿಗೆ ನಾನಿದ್ದೇನೆ. ಮತ್ತೊಮ್ಮೆ ನನಗೆ ಅವಕಾಶ ನೀಡಿ ಆಶೀರ್ವಾದ ಮಾಡಬೇಕೆಂದು ಮತದಾರರಲ್ಲಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಜಲ್ಲಿ ರಮೇಶ್, ಬಿಜೆಪಿ ಮುಖಂಡ ಮುಕುಂದರಾಜ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿದ್ದರು.

Related