ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದ, 60 ನೇ ವಾರ್ಷಿಕೋತ್ಸವ ಸಂಭ್ರಮ.

ಬೆಂಗಳೂರಿನಲ್ಲಿರುವ   ಪ್ರಖ್ಯಾತ ಶ್ರೀ ಸುಬ್ರಹ್ಮಣ್ಯ ಸ್ವಾಮಿ  ದೇವಸ್ಥಾನಗಳ ಪೈಕಿ ಕುಮಾರಪಾರ್ಕ್ ಪಶ್ಚಿಮ ಬಡಾವಣೆಯಲ್ಲಿ ಆನಂತ ಶ್ರೀ ವಿಭೂಷಿತ ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಅಮೃತಹಸ್ತದಿಂದ 1962 ರಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀವಲ್ಲಿ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನವು ಅಂದಿನಿಂದಲೂ ಈ ಭಾಗದಲ್ಲಿ ಮಾತ್ರವಲ್ಲದೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನೂ ದಾಟಿ, ದೂರದೂರದ ನೆರೆ ಹೊರೆಯ ರಾಜ್ಯಗಳಿಂದಲೂ ಬರುವಂತಹ  ಭಕ್ತ ಜನರಲ್ಲಿ ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ, ಬೇಡಿಕೆಗಳನ್ನು ಈಡೇರಿಸುವ ಶ್ರೀ ಕ್ಷೇತ್ರವಾಗಿ ಖ್ಯಾತಿ ಗಳಿಸಿದೆ.

1959 ರಲ್ಲಿ ಶ್ರೀಗಳಿಂದ ಶಂಕುಸ್ಥಾಪನೆಯ ಮೂಲಕ ವೇದ ಬ್ರಹ್ಮ ಶ್ರೀ ವಿದ್ವಾನ್ ಎಸ್. ಸುಬ್ರಾಯ ಶಾಸ್ತ್ರಿಗಳು ಹಾಗೂ ಅವರ ಧರ್ಮಪತ್ನಿ ಸೌಭಾಗ್ಯವತಿ ಸೀತಮ್ಮ ದಂಪತಿಗಳಿಗೆ ಆದ ದೈವ ಪ್ರೇರಣೆ ಹಾಗೂ ಅವರ ದೃಢ ಸಂಕಲ್ಪದಿಂದಾಗಿ ಸ್ಥಾಪಿತವಾಗಿ, ಇಂದಿಗೂ ಅವರ ವಂಶಸ್ಥರಿಂದಲೇ ಧರ್ಮಬದ್ಧವಾದ  ನಿರ್ವಹಣೆಯಲ್ಲಿ ಎಸ್. ಗಣೇಶ ಶಾಸ್ತ್ರಿಗಳ ಆಡಳಿತದಲ್ಲಿ, ಈಗ ಭಕ್ತರಿಗೆ  ಅಭಯಪ್ರದ ವರಗಳನ್ನು ನೀಡುತ್ತಿರುವ ಕ್ಷೇತ್ರವಾಗಿರುವ ಈ ದೇಗುಲಕ್ಕೆ 60 ನೇ ವಾರ್ಷಿಕೋತ್ಸವದ ಪ್ರಯುಕ್ತ ಪುನಃ ಪ್ರತಿಷ್ಠಾಪನ ಮಹೋತ್ಸವದೊಂದಿಗೆ ನೂತನವಾಗಿ ನಿರ್ಮಿಸಲ್ಪಟ್ಟಿರುವ ವಿಮಾನ ಗೋಪುರ ಹಾಗೂ ರಾಜಗೋಪುರಗಳ ಮಹಾಕುಂಭಾಭಿಷೇಕವನ್ನು ಬುಧವಾರದಂದು ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ  ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸನ್ನಿಧಾನಂಗಳವರ ಪರಮಾನುಗ್ರಹದಿಂದ, ತತ್ಕರಕಮಲ ಸಂಜಾತರಾದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು.

Related