ದೇವಸ್ಥಾನ ಆವರಣದಲ್ಲಿ ಹೊಸ ಶಾಲೆಗಳು

ದೇವಸ್ಥಾನ ಆವರಣದಲ್ಲಿ ಹೊಸ ಶಾಲೆಗಳು

ಗಜೇಂದ್ರಗಡ : ರಾಜ್ಯದಲ್ಲಿ ಕೋವಿಡ್ ಸೋಂಕು ಆತಂಕ ಸೃಷ್ಟಿಸಿರುವ ವೇಳೆ ಶಾಲೆಗಳು ಬಂದ್ ಆಗಿದ್ದರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯ ಬಾರದೆಂದು ಸರ್ಕಾರ ಜಾರಿಗೆ ತಂದಿರುವ “ವಿದ್ಯಾಗಮ’ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಮನೆ ಮುಂದಿನ ಜಗಲಿ, ಊರ ಮಧ್ಯದ ಅರಳೀಮರ, ದೇವಸ್ಥಾನದ ಆವರಣಗಳೇ ಈಗ ಹೊಸ ಶಾಲೆಗಳು. ಗ್ರಾಮೀಣ ಭಾಗದ ಮಕ್ಕಳಿಗೆ ಇಲ್ಲಿಯೇ ಇದೀಗ ಪಾಠ-ಪ್ರವಚನ ಆರಂಭಗೊಂಡಿದೆ.

ಜೂನ್‌ನಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಕೊರೋನಾ ಭೀತಿ ಕಾರಣ ಇನ್ನೂ ತೆರೆದಿಲ್ಲ. ಈ ನಡುವೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರದ ವಿದ್ಯಾಗಮ ಎಂಬ ಯೋಜನೆ ಆರಂಭಿಸಿದ್ದು, ಇದಕ್ಕೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಕ್ಕಳು ಇರುವಲ್ಲಿಗೇ ತೆರಳಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಪರಸ್ಪರ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮೊದಲಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕಾ ತಂತ್ರ ರೂಪಿಸಲು ಪಠ್ಯ ಪುಸ್ತಕ, ಅಭ್ಯಾಸ ಪುಸ್ತಕ ಸೇರಿ ಎಲ್ಲಾ ಬಗೆಯ ಕಲಿಕಾ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಕೆಲಸ ಪ್ರಾರಂಭಿಸಿದೆ. ಶಿಕ್ಷಕರು ಶಾಲಾ ಉಸ್ತುವಾರಿ ಸಮಿತಿ ಸದಸ್ಯರು, ಸ್ವಯಂ ಸೇವಕರು ಹಾಗೂ ಪೋಷಕ ರನ್ನು ಈ ಯೋಜನೆಯಡಿ ನಿಯೋಜಿಸಿಲಾಗಿದ್ದು, ಈ ಕುರಿತು ನೂತನ ಡಿಡಿಪಿಐ ಬಸವಲಿಂಗಪ್ಪ ಜಿ.ಎಂ., ಎಲ್ಲಾ ಬಿಇಓಗಳಿಗೆ ಆದೇಶಿಸಿದ್ದಾರೆ.

ಪ್ರತಿ ಶಾಲಾ ವ್ಯಾಪ್ತಿಯಲ್ಲಿ 20-25 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೇಮಿಸಲಾಗುವುದು. “ಸರ್ಕಾರ ಒಳ್ಳೆಯ ಸಮಯದಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಲಿದೆ. ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇದು ಹೆಚ್ಚಿನ ರೀತಿಯಲ್ಲಿ ಸಹಾಯಕಾರಿಯಾಗಿದೆ. ಮಕ್ಕಳ ಕಲಿಕೆಯಲ್ಲಿ ಸೃಜನಶೀಲತೆ ವೃದ್ದಿಸಲು ಸಹಕಾರಿ.

Related