ಕರ್ನಾಟಕದ ಪ್ರಗತಿಪರ ಸರ್ಕಾರದ ಹಿಂದಿನ ಶಕ್ತಿ ಮೋದಿ: ಸಿಎಂ

ಕರ್ನಾಟಕದ ಪ್ರಗತಿಪರ ಸರ್ಕಾರದ ಹಿಂದಿನ ಶಕ್ತಿ ಮೋದಿ: ಸಿಎಂ

ಹಾವೇರಿ: ಕರ್ನಾಟಕದಲ್ಲಿ ಪ್ರಗತಿಪರ ಸರ್ಕಾರ ಇದೆ. ಆಡಳಿತ, ಆರ್ಥಿಕ ಸದೃಢ ಸರ್ಕಾರ ಹಿಂದೆ ಇರುವ ಶಕ್ತಿ ಡಬಲ್ ಎಂಜಿನ ಸರ್ಕಾರದ ನರೇಂದ್ರ ಮೋದಿಜಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಹಾವೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಂದು ಭಾರತೀಯ ಜನತಾ ಪಕ್ಷದ ವಿಜಯದ ದಿನ. ನರೇಂದ್ರ ಮೋದಿಯವರು ಹಾವೇರಿ ಮಣ್ಣು ಮೆಟ್ಟಿದ್ದಾರೆ. ಆ ಕ್ಷಣ ವಿಜಯದ ಪತಾಕೆಯನ್ನು ಹಾರಿಸಿದೆ. ಹಾವೇರಿ, ಧಾರವಾಡ, ಉತ್ತರ ಕರ್ನಾಟಕ, ಸಮಗ್ರ ಕರ್ನಾಟಕದಲ್ಲಿ ಬಿಜೆಪಿ ಸುನಾಮಿ ಆರಂಭವಾಗಿದೆ ಎಂದರು.

ನಾವು ನಮ್ಮ ಡಬಲ್ ಇಂಜಿನ ಸರ್ಕಾರ ಮಾಡಿರುವ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಸುಳ್ಳು ಗ್ಯಾರಂಟಿ, ಸುಳ್ಳು ಆರೋಪ, ಸಮಾಜ ಒಡೆಯುವ ಕೆಲಸ ಮಾಡಿ ಚುನಾವಣೆ ಗೆಲ್ಲಬೇಕೆಂದುಕೊಂಡಿದ್ದಾರೆ ಎಂದರು.

ಸತ್ಯ, ನ್ಯಾಯ, ನಮ್ಮ ಕಾರ್ಯಕ್ರಮ, ಅಭಿವೃದ್ಧಿ ನಮ್ಮ ಚುನಾವಣೆಯ ಧ್ಯೇಯ. ಇವತ್ತು ನಮ್ಮ ಸರ್ಕಾರ ಪೂರ್ಣ ಐದು ವರ್ಷ ಇರಲಿಲ್ಲ. ಕೇವಲ ಮೂರುವರೆ ವರ್ಷ ಸರ್ಕಾರ ಇತ್ತು. ಕೋವಿಡ್ ಬಂದಾಗ ದಕ್ಷತೆಯಿಂದ ಅದರ ನಿರ್ವಹಣೆ ಮಾಡಿದ್ದೇವೆ. ನರೇಂದ್ರ ಮೋದಿಯವರು ವ್ಯಾಕ್ಸಿನೇಷನ್‌ ಕೊಟ್ಟರು. ಡಬಲ್ ಡೋಸ್ ವ್ಯಾಕ್ಸಿನೇಷನ್‌ ಕಳುಹಿಸಿದ್ದರಿಂದ ಇವತ್ತು ನಾವು ಮಾಸ್ಕ್ ಹಾಕಿಲ್ಲ. ಇದು ಡಬಲ್ ಇಂಜಿನ್ ಸರ್ಕಾರ ಎಂದರು.

ಜನರು ಯಾವಾಗ ಸಂಕಷ್ಟಕ್ಕೆ ಒಳಗಾದಾಗ ದಾವಿಸಿ ಬಂದು ಆರೋಗ್ಯ ಚಕ್ರ ಕೊಟ್ಟಿದ್ದು ನರೇಂದ್ರ ಮೋದಿ ಅವರ ಸರ್ಕಾರ. ಪ್ರವಾಹವನ್ನು ದಕ್ಷತೆಯಿಂದ ನಿರ್ವಹಿಸಿ, ಮನೆಗೆ ಐದು ಲಕ್ಷ ಕೊಡುವ ಕೆಲಸ ಬಿಜೆಪಿ ಮಾಡಿದೆ. ಬೆಳೆ ಪರಿಹಾರ ಕೇಂದ್ರ ಸರ್ಕಾರ 6,300 ಕೊಟ್ಟರೆ, 13,200 ರಾಜ್ಯ ಸರ್ಕಾರ ಕೊಟ್ಟಿದೆ. ನೀರಾವರಿಗೆ 15 ಸಾವಿರ ಕೊಟ್ಟರೆ, 25 ಸಾವಿರ ಕೊಟ್ಟಿದ್ದೇವೆ. ತೋಟಕ್ಕೆ 18 ಸಾವಿರ ಕೊಟ್ಟರೆ, 28 ಸಾವಿರ ಕೊಟ್ಟಿದ್ದೇವೆ ಎಂದು ಹೇಳಿದರು.

ಡಬಲ್ ಇಂಜಿನ್ ಸರ್ಕಾರ ಎಂದರೆ ಜನಪರ, ಜನ ಕಲ್ಯಾಣ ಕೆಲಸ, ರೈತರ ಕೆಲಸ. ಕಿಸಾನ್ ಸಮ್ಮಾನ್ ಯೋಜನೆಯಿಂದ ಕಳೆದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ 16 ಸಾವಿರ ಕೋಟಿ ಬಂದಿದೆ. ಹಾವೇರಿ ಜಿಲ್ಲೆಯೊಂದಕ್ಕೆ 3 ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಬಂದಿದೆ. ಇದಕ್ಕಿಂತ ಇನ್ನು ಏನು ಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪು ಕೋಟೆ ಮೇಲೆ ನಿಂತು ದೇಶದ ಪ್ರತಿಯೊಂದು ಮನೆ ಮನೆಗೆ ಕುಡಿಯುವ ನೀರು ಕೊಡುತ್ತೇವೆ ಎಂದರು. ಜಲ ಜೀವನ ಮಿಷನ್ ನಲ್ಲಿ ಕರ್ನಾಟಕ ನಂಬರ್ ಒನ್ ಇದೆ. ಕಳೆದ 73 ವರ್ಷದಲ್ಲಿ 20 ಲಕ್ಷ ಮನೆಗೆ ನೀರು ಸಿಕ್ಕಿದೆ. ನಾವು ಕಳೆದ ಮೂರು ವರ್ಷದಲ್ಲಿ 40 ಲಕ್ಷ ಮನೆಗೆ ಕುಡಿಯುವ ನೀರು ಕೊಟ್ಟಿದ್ದೇವೆ ಎಂದರು.

ಆಯುಷ್ಮಾನ್ ಭಾರತ ಯೋಜನೆ ಮೂಲಕ ಒಂದುವರೆ ಕೋಟಿ ಜನರಿಗೆ ಕಾರ್ಡ್ ಕೊಟ್ಟಿದ್ದು, 5 ಲಕ್ಷ ರೂ ವರೆಗೆ ಆರೋಗ್ಯ ರಕ್ಷಣೆಗೆ ನೀಡಲಾಗುತ್ತಿದೆ. ನಮ್ಮ ಪ್ರಣಾಳಿಕೆಯಲ್ಲಿ ಅದನ್ನು 10 ಲಕ್ಷಕ್ಕೆ ಏರಿಸುತ್ತಿರುವುದಾಗಿ ಹೇಳಿದ್ದೇವೆ. ರೈತರಿಗೆ ಸಾಲ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸುತ್ತಿದ್ದೇವೆ. ಯಶಸ್ವಿ ಯೋಜನೆ, ಬೀಜ, ಗೊಬ್ಬರಕ್ಕೆ 10 ಸಾವಿರ ರೂ ಘೋಷಣೆ ಮಾಡಿದ್ದೇವೆ. ದೀನದಲಿತರಿಗೆ 20 ಲಕ್ಷ ರೂ ಒಂದು ಎಕರೆ ಜಮೀನು ಖರೀದಿಗೆ ಯೋಜನೆ ಮಾಡಿದ್ದೇವೆ ಎಂದರು.

ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಹಳ್ಳಿಗಳಲ್ಲಿನ ಮಹಿಳೆಯರಿಗೆ ಐದು ಲಕ್ಷ ಕೊಡುತ್ತಿದ್ದೇವೆ. ಸ್ವಾಮಿ ವಿವೇಕಾನಂದ ಯುವಶಕ್ತಿ  ಯೋಜನೆಯಿಂದ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ಗ್ಯಾರಂಟಿ, ಗ್ಯಾರಂಟಿ ಎಂದು ಹೇಳುತ್ತಿದೆ. ಅಕ್ಕಿ 10 ಕೆಜಿ ಕೊಡುತ್ತೇವೆ ಅಂತಿದ್ದಾರೆ. 2013 ರಲ್ಲಿ 10 ಕೆಜಿ ಅಕ್ಕಿ ಕೊಡುತ್ತಿದ್ದೇವು. ಇವರು ಬಂದು 5 ಕೆಜಿ ಮಾಡಿದರು. ಕೋವಿಡ್ ಸಮಯದಲ್ಲಿ ನರೇಂದ್ರ ಮೋದಿಯವರು ಗರೀಬ್ ಕಲ್ಯಾಣ ಯೋಜನೆಯಡಿ 10 ಕೆಜಿ ಅಕ್ಕಿ ಪ್ರತಿ ಬಡವರಿಗೆ ನೀಡಿದರು. ನರೇಂದ್ರ ಮೋದಿಯವರದ್ದು 30 ರೂ, 3 ರೂ ಗೋಣಿ ಚೀಲ ಸಿದ್ದರಾಮಯ್ಯರದ್ದು. ಯಾರದ್ದೂ ದುಡ್ಡು ಯಲ್ಲಮ್ಮನ  ಜಾತ್ರೆ ಮಾಡಿದ್ದಾರೆ. ಈ ಗ್ಯಾರಂಟಿಗಳು ಮೇ 10 ರವರೆಗೆ ಮಾತ್ರ. 10 ನಂತರ ಘಳಗಂಟಿ ಎಂದರು.

ಭ್ರಷ್ಟಾಚಾರದ ಬಗ್ಗೆ ಬಹಳ ಮಾತನಾಡಿದರು. ನಮ್ಮ ಸರ್ಕಾರದ ಮೇಲಿನ ಒಂದು ಪುರಾವೆ ಕೊಡಿ. ಕೋರ್ಟ್, ವಿಧಾನಸಭೆಯಲ್ಲಿ ದಾಖಲೆ ಕೊಡಲಿಲ್ಲ. ಸುಳ್ಳು ಆರೋಪ ಮಾಡಿ ಜನರ ತಪ್ಪು ದಾರಿಗೆ ತರುತ್ತಿದ್ದೀರಿ. ನಿಮ್ಮ ಕಾಲದಲ್ಲಿ ರೀಡೋದಲ್ಲಿ 8 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಸಣ್ಣ ನೀರಾವರಿ, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಹಾಸಿಗೆ ದಿಂಬು ಬಿಟ್ಟಿಲ್ಲ ನೀವು. ನಿಮಗೆ ನಾಚಿಕೆ ಆಗಬೇಕು ಎಂದರು.

ಅಪ್ಪರ್ ತುಂಗಾ ಯೋಜನೆ ಮಾಡಿದ್ದು ಬಿಜೆಪಿ ಸರ್ಕಾರ. ಮೆಗಾ ಡೈರಿ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಮಾಡಿದ್ದು ಬಿಜೆಪಿ ಸರ್ಕಾರ. ಅಭಿವೃದ್ಧಿಗಾಗಿ ಬಿಜೆಪಿ ಮೇ 10 ಕ್ಕೆ ಮತ ಕೊಡಿ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ತರೋಣ. ಸುಭಿಕ್ಷು, ಸುರಕ್ಷಿತ ಸರ್ಕಾರ ಕಟ್ಟೋಣ. ನಾವೆಲ್ಲರೂ ದೇಶಭಕ್ತರು. ದೇಶಭಕ್ತ ಪಕ್ಷ ನಮ್ಮದು. ‌ಪಿಎಫ್‌ಐ ಬ್ಯಾನ್ ಮಾಡಿದ್ದೇವೆ. ದೇಶ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸಿದ ಕಾಂಗ್ರೆಸ್ ಕೇಸ್ ಗಳನ್ನು ಹಿಂದಕ್ಕೆ ಪಡೆದರು. ಪಿಎಫ್‌ಐ, ಎಸ್.ಡಿ.ಪಿ.ಐ ಕಪಿಮುಷ್ಠಿಯಲ್ಲಿದೆ. ಅವರ ಒತ್ತಡಕ್ಕೆ ಮಣಿದು ಬಜರಂಗದಳ ಬ್ಯಾನ್ ಮಾಡಿ ಅಂತಿದ್ದಾರೆ. ಬಜರಂಗದಳ ಮುಟ್ಟುವ ತಾಕತ್ತು ಯಾರಿಗಿದೆ. ಕಾಂಗ್ರೆಸ್ ಪಕ್ಷವನ್ನು ಬೇರು ಸಹಿತ ಕಿತ್ತು ಒಗೆಯಬೇಕು ಎಂದರು.

ವಿಶ್ವವೇ ಗುರುತಿಸಿರುವ ಸಮಗ್ರ ಭಾರತದ ಸಮೃದ್ಧ ಅಭಿವೃದ್ಧಿ, ಸಬ್ ಕಾ ಸಾತ್, ಸಬ್ ಕಾ ವಿಕಾಸ, ಆತ್ಮ ನಿರ್ಭರ ಭಾರತವನ್ನು ಇಟ್ಟುಕೊಂಡು ಸಶಕ್ತ ಭಾರತ ಕಟ್ಟುವ ನೇತೃತ್ವ ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದಿದೆ. ಇದಕ್ಕೆ ಎಲ್ಲರೂ ಆಶೀರ್ವಾದ ಮಾಡಬೇಕು, ಮಾಡಿಸಬೇಕು ಎಂದರು.

Related