ಲಾಕ್‌ಡೌನ್ ಎಫೆಕ್ಟ್: ವಿಡಿಯೊ ಕಾಲ್ ಮೂಲಕ ಮುಸ್ಲಿಂ ಜೋಡಿ ವಿವಾಹ

ಲಾಕ್‌ಡೌನ್ ಎಫೆಕ್ಟ್: ವಿಡಿಯೊ ಕಾಲ್ ಮೂಲಕ ಮುಸ್ಲಿಂ ಜೋಡಿ ವಿವಾಹ

ಧಾರವಾಡ: ಮಹಾಮಾರಿ ಕೊರೋನಾ ರಣಕೇಕೆಯಿಂದ ವಿಶ್ವದಲ್ಲಿ ಜನತೆ ಅಲ್ಲೋಲ ಕಲ್ಲೋಲವಾಗಿದೆ. ನಿತ್ಯವೂ ಸತ್ತು-ಬದುಕುವ ಸಂದಿಗ್ಧತೆಯ ನಡುವೆಯೂ ಈ ಮುಸ್ಲಿಂ ಜೋಡಿಯು ವಿಡಿಯೋ ಕಾಲ್  ಮೂಲಕ ಮದುವೆಯಾಗಿ ನವಜೀವನಕ್ಕೆ ಕಾಲಿಟ್ಟಿದೆ.

ಧಾರವಾಡದ ವರ ಇಮ್ರಾನ್ ಹಾಗೂ ಕೊಪ್ಪಳ ವಧು ತಾಜಮಾ ಬೇಗಂ ವಿಶಿಷ್ಟ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಜೋಡಿ.  ಆನ್‌ಲೈನ್ ಮೂಲಕ ಸತಿ-ಪತಿಗಳಾಗುವ ಮೂಲಕ ಹೊಸದೊಂದು ಮನ್ವಂತರಕ್ಕೆ ನಾಂದಿ ಹಾಡಿದಂತಾಗಿದೆ.

ಈ ನವಜೋಡಿಯು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಲಾಕ್‌ಡೌನ್ ಪಾಲನೆ ದೃಷ್ಟಿಯಿಂದ ತಂತ್ರಜ್ಞಾನದ ಮೊರೆ ಹೋದ ಈ ಜೋಡಿಯ ವಿವಾಹಕ್ಕೆ ಮುಸ್ಲಿಂ ಸಮಾಜದ ಹಿರಿಯರು ಸಹ ಸಮ್ಮತಿ ಸೂಚಿಸಿದ್ದು ಶ್ಲಾಘನೀಯ.

ಮದುವೆ ಎಂದಾಕ್ಷಣ ಪ್ರತಿಯೊಬ್ಬರ ಜೀವನದಲ್ಲಿ ಅವರದ್ದೇ ಆದಂತಹ ಕನಸುಗಳಿರುತ್ತವೆ. ಆದರೆ, ಭಾರತ  ಸರ್ಕಾರದ ಆಜ್ಞೆ ಪಾಲಿಸುವ ಮತ್ತು ಶುಭ ಸಮಾರಂಭ ಮುಂದೂಡದಂತೆ ನಮ್ಮ (ವರ) ಹಾಗೂ ವಧು ಮನೆಯ ಹಿರಿಯರನ್ನು ಅಂತರ್ಜಾಲ ಮದುವೆಗೆ ಒಪ್ಪಿಸಿದೆ. ಎರಡು ಮನೆಯವರು ಒಪ್ಪಿಗೆ ಪಡೆದು ಮಂಗಳವಾರ ವಿಡಿಯೋ ಕಾಲ್ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಹೇಳುತ್ತಾರೆ ಇಮ್ರಾನ್.

ವಿಶ್ವದ ಜನಮಾನಸದಲ್ಲಿ ಕೊರೋನಾ ಸಾಕಷ್ಟು ಹಾವಳಿ ಸೃಷ್ಟಿಸಿದೆ. ಹೀಗಾಗಿ ಹೆಚ್ಚಿನ ಜನತೆ ಸೇರದಂತೆ ಸರ್ಕಾರವೂ ಆಜ್ಞೆ ಹೊರಡಿಸಿದೆ. ಈ ಕಾರಣಕ್ಕೆ ಮಗನ ಮದುವೆ ಆನ್‌ಲೈನ್ ಮೂಲಕ ಮಾಡಿದೆ. ಲಾಕ್‌ಡೌನ್ ಹಾಗೂ ನಿಷೇಧಾಜ್ಞೆ ಮುಕ್ತಾಯಗೊಂಡ ಬಳಿಕ ಸೊಸೆಯನ್ನು ಮನೆ ತುಂಬಿಸಿಕೊಳ್ಳುವುದಾಗಿ ಹೇಳುತ್ತಾರೆ ಇಮ್ರಾನ್ ಕುಟುಂಬಸ್ಥರು.

Related