ಮೈಸೂರು, ಮಾ. 6 : ಬಿಜೆಪಿ ಮುಖಂಡನನ್ನು ಆತನ ಸ್ನೇಹಿತರೇ ಬಿಯರ್ ಬಾಟಲಿನಿಂದ ಚುಚ್ಚಿ ಹುಟ್ಟುಹಬ್ಬದ ದಿನವೇ ಕೊಲೆ ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಎಂದು ಗುರುತಿಸಲಾಗಿದೆ.
ಆನಂದ್ ಹುಟ್ಟುಹಬ್ಬವಿದ್ದು, ಕುವೆಂಪು ನಗರದ ಲವಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ರೂಮ್ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾಗ ಸ್ನೇಹಿತರಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾನೆ. ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಬಂದಿದ್ದ ಆನಂದ್, ನಂತರ ವಾಪಸ್ ಬಂದು ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ರೂಮ್ ಫಿಕ್ಸ್ ಮಾಡಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ. ಪಾರ್ಟಿ ನಡೆಯುವಾಗಲೇ ಸ್ನೇಹಿತರೊಂದಿಗೆ ಮಾತಿನ ಚಕಮಕಿಯಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಿಯರ್ ಬಾಟಲಿಯಿಂದ ಸ್ನೇಹಿತರೇ ಆನಂದನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.