ಕಾಡು ಹಂದಿಗಳ ಹಾವಳಿಯಿಂದ ಕಂಗೆಟ್ಟ ರೈತರು

ಕಾಡು ಹಂದಿಗಳ ಹಾವಳಿಯಿಂದ ಕಂಗೆಟ್ಟ ರೈತರು

ಕೊಟ್ಟೂರು: ರೈತರಿಗೆ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ರೈತನೇ ದೇಶದ ಬೆನ್ನೆಲುಬು ಎನ್ನುವವರು ರೈತರ ಬೆನ್ನಿಗೆ ನಿಲ್ಲಬಾರದೇ? ಎಂಬ ಕೂಗು ಕೇಳಿಬರುತ್ತಿದೆ.

ಕೊಟ್ಟೂರು ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಕಾಡು ಹಂದಿಗಳ ಕಾಟ ಹೆಚ್ಚಾಗಿದ್ದು ರೈತರು ಸಾರ್ವಜನಿಕರು ಭೀತಿಯಲ್ಲಿ ಮುಳುಗಿದ್ದಾರೆ.

ಮುಂಗಾರು ಅವಧಿಯಲ್ಲಿ ರೈತರು ಈಗಾಗಲೇ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡಿದ್ದು ಫಸಲನ್ನು ಪಡೆಯುವ ಸಮಯದಲ್ಲೇ ಕಾಡು ಹಂದಿಗಳ ಹಾವಳಿಯಿಂದ ರೈತರು ಕಂಗೆಟ್ಟಿದ್ದಾರೆ.

ಬೋರನಹಳ್ಳಿ, ಕೋಡಿಹಳ್ಳಿ, ಹ್ಯಾಳ್ಯಾ, ಲೊಟ್ಟನಕೇರಿ, ಮಲ್ಲ ನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಕಾಡು ಹಂದಿಗಳು ದಿನವೂ ದಾಳಿ ನಡೆಸುತ್ತಿದ್ದು, ಬೆಳೆದ ಫಸಲು ಕಾಡು ಹಂದಿಗಳ ದಾಳಿಯಿಂದ ನಾಶವಾಗಿದೆ.

ಮೂಗಪ್ಪ ಎಂಬ ರೈತ ತನ್ನ ಎರಡು ಎಕರೆ ಗದ್ದೆಯಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದು, ಕಾಡುಹಂದಿಗಳಿಂದ ಬೆಳೆ ನೆಲ ಕಚ್ಚಿದೆ. ಉತ್ತರ ನೀಡಬೇಕಾದ ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ. ಕಂಗೆಟ್ಟ ರೈತರ ಸ್ಥಿತಿ ಏನು? ಉತ್ತರ ನೀಡುವವರ್ಯಾರು? ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳೇ ದಯಮಾಡಿ ರೈತರೆಡೆ ಗಮನಹರಿಸಿ ಎಂದು ಕೊಟ್ಟೂರು ಜನ ಕೂಗುತ್ತಿದ್ದಾರೆ.

Related