ಕನ್ನಡ ರಾಜ್ಯೋತ್ಸವ ಇದು ಕನ್ನಡಿಗರ ಹಬ್ಬ

ಕನ್ನಡ ರಾಜ್ಯೋತ್ಸವ ಇದು ಕನ್ನಡಿಗರ ಹಬ್ಬ

ಬೆಂಗಳೂರು: ಕರ್ನಾಟಕ ರಾಜ್ಯದ ಜನತೆ ಪ್ರತಿ ವರ್ಷವು ನವೆಂಬರ್ 1 ರಂದು ವಿಶೇಷವಾಗಿ ಕನ್ನಡ ರಾಜ್ಯೋತ್ಸವನ್ನು ಯಾವ ಜಾತಿ ಭೇದ ಭಾವವಿಲ್ಲದೆ ಅತಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಬೀಡು. ಸಾಧು-ಸಂತರು-ದಾಸರು- ಶಿವಶರಣರು – ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು. ಕನ್ನಡ ನಾಡಿನಲ್ಲಿ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ. ನವೆಂಬರ್ 1 ರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮದವರು ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ.

ಇನ್ನು ನವೆಂಬರ್ 1 ರಂದು ವಿಶೇಷವಾಗಿ ಕನ್ನಡ ರಾಜ್ಯೋತ್ಸವನ್ನು ರಾಜ್ಯದ ಪ್ರತಿ ಗ್ರಾಮದಲ್ಲೂ, ಪ್ರತಿ ಶಾಲೆ, ಕಾಲೇಜು, ಕಚೇರಿ, ಕಂಪನಿಗಳಲ್ಲಿ ಆಚರಣೆ ಮಾಡುತ್ತಾರೆ. ಈ ದಿನದ ಮಹತ್ವವನ್ನು ಸಹ ಅರಿಯುವ ಕಾರ್ಯಕ್ರಮಗಳು ಎಲ್ಲೆಲ್ಲೂ ನಡೆಯುತ್ತವೆ. ವಿಶೇಷ ಭಾಷಣಗಳು, ಕನ್ನಡ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು, ಇನ್ನು ಶಾಲಾ- ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ.

ಕರ್ನಾಟಕ ಹೆಸರು ಬಂದದ್ದು ಹೇಗೆ ಎಂದು ನೋಡುವುದಾದರೆ…, ಕರ್ನಾಟಕ ಪದದ ಮೂಲ ಸಂಸ್ಕೃತ. ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ. ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಕರು + ನಾಡು = ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದು ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ.

ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸಿವೆ. ಕನ್ನಡಿಗರ ನಾಡನ್ನು ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ಹೆಸರಿಡಬೇಕು ಎಂದು ಮೊದಲು 1972 ರ ಜುಲೈನಲ್ಲಿ ಈ ಬಗ್ಗೆ ಚರ್ಚೆ ಎದ್ದಿದ್ದು. ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲೂ ಇದಕ್ಕೆ ಸರ್ವಾನುಮತದಿಂದ ಅನುಮತಿ ಸಿಕ್ಕಿತು. ನವೆಂಬರ್ 1 ರಂದು ರಾಜ್ಯದಾದ್ಯಂತ ರಾಜ್ಯೋತ್ಸವ ದಿನವನ್ನು ಕೆಂಪು ಮತ್ತು ಹಳದಿ ಕನ್ನಡ ಧ್ವಜದ ಮೂಲಕ ರಾಜ್ಯದಾದ್ಯಂತ ಅತ್ಯಂತ ಸಂತೋಷ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.

ಕನ್ನಡ ಗೀತೆ ‘ಜಯ ಭಾರತ ಜನನೀಯ ತನುಜಾತೆ. ಜಯಹೇ ಕರ್ನಾಟಕ ಮಾತೆ’ ಹಾಡುವುದರೊಂದಿಗೆ ಇಡೀ ರಾಜ್ಯವು ಈ ದಿನದಂದು ಕನ್ನಡದ ಹಬ್ಬವನ್ನು ಆಚರಣೆ ಮಾಡುತ್ತದೆ.

ಎಷ್ಟು ಸಲ ಜನ್ಮವೆತ್ತಿದರೂ ಕನ್ನಡದ ಮಣ್ಣಲ್ಲೇ ಹುಟ್ಟಬೇಕು ಎಂದು ಪ್ರಾರ್ಥಿಸೋಣ. ಕನ್ನಡದ ಸಂಭ್ರಮದ ಹಬ್ಬಕ್ಕೆ ಎಲ್ಲರಿಗೂ ಹಾರ್ದಿಕ ಶುಭಾಶಯಗಳು

Related