ಕಛೇರಿಗೆ ಚಪ್ಪಲಿ ಸವೆಸುವುದು ಅಸಾಧ್ಯ–ರೈತರ ಅಳಲು

ಕಛೇರಿಗೆ ಚಪ್ಪಲಿ ಸವೆಸುವುದು ಅಸಾಧ್ಯ–ರೈತರ ಅಳಲು

ಮುಂಡಗೋಡ : ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಬಾಳೆ ಹಾಗೂ ಗೋವಿನ ಜೋಳ ಬೆಳೆ ನೆಲಕಚ್ಚಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.ಅರಶಿಣಗೇರಿ ಸರ್ವೇ ನಂ. 38 ಸುರೇಶ ಗೌಳಿ ಎಂಬುವವರ ತೋಟದಲ್ಲಿ ಬೆಳೆದ ಸುಮಾರು 1300 ಬಾಳೆ ಗಿಡ ಹಾಗೂ 2 ಎಕರೆ ಪ್ರದೇಶದಲ್ಲಿ ಬೆಳೆದ ಪಸಲು ಭರಿತವಾದ ಗೋವಿನ ಜೋಳ ಬೆಳೆ ಗಾಳಿ ಮಳೆಗೆ ಸಂಪೂರ್ಣ ನೆಲಕಚ್ಚಿದ್ದು, ಸುಮಾರು 4 ಲಕ್ಷ ರೂ. ಹಾನಿಯಾಗಿದೆ ಎನ್ನಲಾಗಿದ್ದು, ಕೈಗೆ ಬಂದತುತ್ತು ಬಾಯಿಗೆ ಬರದಂತಾಗಿದೆ.

ಪುಡಿಗಾಸಿನ ಪರಿಹಾರಕ್ಕೆ ಮನವಿ ಸಲ್ಲಿಸದ ರೈತ : ಕಳೆದ ವರ್ಷ ಇದೇ ರೀತಿ ಗಾಳಿ ಮಳೆಗೆ ಸುಮಾರು 4000 ಬಾಳೆ ಗಿಡಗಳು ಬಿದ್ದು ಲಕ್ಷಾಂತರ ರೂ. ನಷ್ಟವಾಗಿತ್ತು. ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಅರ್ಜಿ ಸಲ್ಲಿಸಿದ್ದೆವು. ಆದರೆ ಸರ್ಕಾರದಿಂದ ಬಂದ ಪರಿಹಾರ ಕೇವಲ 6 ಸಾವಿರ ರೂ. ಮಾತ್ರ. ಹಾಗಾಗಿ ಪುಡಿಗಾಸಿನ ಪರಿಹಾರಕ್ಕಾಗಿ 20 ಸಲ ಕಛೇರಿಗೆ ಅಲೆಯುವುದು ಬೇಡ ಎಂದು ಈ ಬಾರಿಯಾವುದೇ ಇಲಾಖೆ ಅಧಿಕಾರಿಗಳಿಗೂ ವಿಷಯತಿಳಿಸಿಲ್ಲ ಎನ್ನುತ್ತಾರೆ ಬೆಳೆ ಹಾನಿಗೊಳಗಾದ ರೈತರು.

ಇದೇ ರೀತಿ ತಾಲೂಕಿನಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೆಲವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಇನ್ನುಕೆಲವರು ಪರಿಹಾರಕ್ಕಾಗಿ ಅಂಗಲಾಚುವುದು ಬೇಡ ಎಂದು ಸುಮ್ಮನಾಗುತ್ತಿದ್ದಾರೆ. ಹಾಗಾಗಿ ಸಂಬಂಧಿಸಿದ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೆಳೆ ಪರಿಹಾರಕ್ರಮ ಕೈಗೊಂಡು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಟ್ಟು ರೈತರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

Related