ಡಾ. ಎನ್. ಸತ್ಯಪ್ರಕಾಶ್ ಸಂಪಾದಿತ “ಅನರ್ಘ್ಯ ರತ್ನಗಳು” ಕೃತಿ ಲೋಕಾರ್ಪಣೆ

ಡಾ. ಎನ್. ಸತ್ಯಪ್ರಕಾಶ್ ಸಂಪಾದಿತ “ಅನರ್ಘ್ಯ ರತ್ನಗಳು” ಕೃತಿ ಲೋಕಾರ್ಪಣೆ

ಬೆಂಗಳೂರು. ಜ,21: ಡಾ ಎನ್ ಸತ್ಯಪ್ರಕಾಶ್ ಅವರು ಶಿಲೆಯಲ್ಲಿನ ಶಿಲ್ಪಗಳನ್ನು ಹೊರತೆಗೆದು ಕೃತಿಯ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾರೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ ಸಿ ಎನ್ ಮಂಜುನಾಥ್ ಇಲ್ಲಿ ಇಂದು ತಿಳಿಸಿದರು.

ನಗರದ ಶೇಷಾದ್ರಿ ರಸ್ತೆಯಲ್ಲಿನ ಬಬ್ಬೂರುಕಮ್ಮೆ ಸೇವಾ ಸಮಿತಿಯ ಸಭಾಂಗಣದಲ್ಲಿ ನಡೆದ ಅನರ್ಘ್ಯ ರತ್ನಗಳು ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ರಾಜಾಜಿನಗರದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಯಲ್ಲಿನ ವಿದ್ಯಾರ್ಥಿಯಾಗಲೀ ವಿದ್ಯಾರ್ಥಿನಿಯಾಗಲೀ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಿ ಉತ್ತುಂಗದ ಶಿಖರಕ್ಕೆ ಏರಿದರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯಲ್ಲಿ ಸದಭಿರುಚಿ ಹೊಂದಿರುವ ಶಿಕ್ಷಕರಿಗೆ ದೊರೆತ ವಿದ್ಯಾರ್ಥಿಗಳು ಕೇವಲ ವಿದ್ಯೆ ಮಾತ್ರ ಕಲಿಯುವುದಿಲ್ಲ ವಿದ್ಯೆಯೊಂದಿಗೆ ಸಂಸ್ಕಾರವನ್ನೂ ಕಲಿಯುತ್ತಾರೆ. ಇಲ್ಲಿ ಡಾ ಎನ್ ಸತ್ಯ ಪ್ರಕಾಶ್ ಅವರಂತಹ ಶ್ರೇಷ್ಠ ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಮಾನ್ಯರು ಕೂಡಾ ಅಸಾಮಾನ್ಯ ಸಾಧನೆ ಮಾಡಿದವರಾಗಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಭಗವಂತನು ಅವಕಾಶಗಳನ್ನು ನೀಡುತ್ತಾನೆ, ಆದರೆ, ಅವುಗಳನ್ನು ಸರಿಯಾದ ಮಾರ್ಗದಲ್ಲಿ ಸದ್ಬಳಕೆ ಮಾಡಿಕೊಳ್ಳಲು ಡಾ ಸತ್ಯ ಪ್ರಕಾಶ್ ಅವರಂತಹ ಗುರುವಿನ ಸಹಕಾರ ಅಗತ್ಯ. ಇಂತಹ ಶಿಕ್ಷಕರ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಮತ್ತೊಂದು ಪ್ರಣತಿಯಾಗಿ ಬೆಳಗುತ್ತಾರೆ. ಎಂದು ಡಾ ಸಿ ಎನ್ ಮಂಜುನಾಥ್ ಅವರು ಭಾವುಕರಾಗಿ ನುಡಿದರು.

ಡಾ. ಎನ್ ಸತ್ಯಪ್ರಕಾಶ್ ಅವರು ಮಾತನಾಡಿ 1972 ರಿಂದ ತಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮಗೆ ಹೇಗೆ ಸ್ಫೂರ್ತಿ ನೀಡಿದ್ದಾರೆ ಎಂಬ ಯಶೋಗಾಥೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ ಎಂದರು.

ತಮ್ಮ ವಿದ್ಯಾರ್ಥಿಗಳಲ್ಲಿ 75 ಹೆಚ್ಚು ಮಂದಿ ಪಿ ಹೆಚ್ ಡಿ ಪದವಿ ಪಡೆದುಕೊಂಡಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕಾರಿಸಿದ್ದಾರೆ. ಇದು ತಮ್ಮೆಲ್ಲಾ ಸಾಧಕ ಶಿಷ್ಯರ ಪರಿಚಯದ ಕೃತಿಯಾಗಿದೆ. ಸಧ್ಯದಲ್ಲೇ ಇದೇ ಕೃತಿಯ ಮುಂದುವರೆದ – ಎರಡನೇ ಭಾಗ – ಬರೆಯಲು ಪ್ರಾರಂಭಿಸುವುದಾಗಿ ಪ್ರಕಟಿಸಿದರು.

ಜ್ಞಾನದೀಪಿಕ ಶೈಕ್ಷಣಿಕ ದತ್ತಿ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಗೀತರಚನಾಕಾರ ಹಾಗೂ ರಾಗಸಂಯೋಜಕ ನಾದಬ್ರಹ್ಮ ಡಾ ಹಂಸಲೇಖ, ಪದ್ಮಶ್ರೀ ಪುರಸ್ಕೃತ ವಿ. ವೈ. ವೆಂಕಟೇಶ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮಹಾಪೌರ ಎಸ್ ಹರೀಶ್, ದತ್ತಿ ಸಂಸ್ಥೆಯ ಕಾರ್ಯದರ್ಶಿ ಎನ್ ಶಿವಮೂರ್ತಿ ವಿದ್ಯಾ ವರ್ಧಕ ಸಂಘದ ಹಳೇ ವಿದ್ಯಾರ್ಥಿಗಳೂ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Related