ಸಿ.ಟಿ.ರವಿ ಯಷ್ಟು ಕೆಳಮಟ್ಟಕ್ಕೆ ನಾನು ಇಳಿಯಲು ಇಷ್ಟಪಡುವುದಿಲ್ಲ: ತಂಗಡಗಿ

ಸಿ.ಟಿ.ರವಿ ಯಷ್ಟು ಕೆಳಮಟ್ಟಕ್ಕೆ ನಾನು ಇಳಿಯಲು ಇಷ್ಟಪಡುವುದಿಲ್ಲ: ತಂಗಡಗಿ

ಬೆಂಗಳೂರು: ನಮ್ಮ ಮಕ್ಕಳ ದಾರಿ ತಪ್ಪಿಸುವವರ ವಿರುದ್ದ ಮಾತನಾಡಿದೆ. ಚಿಕ್ಕಪ್ಪ, ಅಣ್ಣ, ಹಿತಚಿಂತಕನಾಗಿ ಉತ್ತರಕರ್ನಾಟಕ ಭಾಷೆಯಲ್ಲಿ ಮಾತನಾಡಿದ್ದು ತಪ್ಪೇ?. ಸಿ.ಟಿ.ರವಿ ಅವರು ಅಪ್ಪನಿಗೆ ಹುಟ್ಟಿದ್ದರೇ ಎನ್ನುವ ಮಾತನ್ನು ಆಡಿದ್ದಾರೆ. ನಾನು ಸಹ ಯಾರಿಗೆ ಹುಟ್ಟಿದ್ದೀರಿ ಎಂದು ಕೇಳಬಹುದಿತ್ತು. ಆದರೆ ಅವರಷ್ಟು ಕೆಳಮಟ್ಟಕ್ಕೆ ನಾನು ಇಳಿಯಲು ಇಷ್ಟಪಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾರಿಗೆ ಹುಟ್ಟಿದ್ದೇವೆ ಎಂದು ನಮ್ಮ ತಾಯಂದಿರಿಗೆ ಗೊತ್ತಿರುತ್ತದೆ. ನೀವು ಸವಾಲಿಗೆ ಸಿದ್ದರಿದ್ದರೆ ನನ್ನ ತಾಯಿಯನ್ನು ಬಿಜೆಪಿ ಕಚೇರಿಗೆ ಕರೆದುಕೊಂಡು ಬರುತ್ತೇನೆ, ತಯಾರಿದ್ದೀರಾ?. ದಿನಾಂಕ ಹೇಳಿದರೆ ನಾನು ಕರೆದುಕೊಂಡು ಬರಲು ತಯಾರಿದ್ದೇನೆ. 2 ಕೋಟಿ ಉದ್ಯೋಗ, ನರೇಗಾ ಅನ್ಯಾಯದ ಬಗ್ಗೆ ಉತ್ತರ ಕೊಡಲು ಸಿದ್ದರಿದ್ದೀರಾ?

ಬಿಜೆಪಿಯವರು ಸುಳ್ಳು, ಕಪಟ, ಮೋಸ ಮಾಡುವುದರ ಜೊತೆಗೆ ನಮ್ಮ ಯುವಕರ, ಮಕ್ಕಳ ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ನಾನು ಕಾರಟಗಿಯಲ್ಲಿ ಹೇಳಿದ ಹೇಳಿಕೆಗೆ ಬದ್ದನಾಗಿದ್ದೇನೆ. ಮಾಧ್ಯಮದವರು ನನ್ನ ಭಾಷಣದ ಪೂರ್ಣಪಾಠವನ್ನು ಹಾಕಿ, ಕೇವಲ ತುಣುಕನ್ನು ಮಾತ್ರ ಏಕೆ ಹಾಕಿದ್ದೀರಿ?. ಬಿಜೆಪಿಯವರು 2014 ರ ಲೋಕಾಸಭಾ ಚುನಾವಣೆ ವೇಳೆ ಮಾಡಿದ ಭಾಷಣಗಳನ್ನು ಅವರೇ ಕೇಳಲಿ. ಅವರ ಭಾಷಣ ಕೇಳಿ ಅವರೇ ಬಿಜೆಪಿಗೆ ಮತ ನೀಡುವುದಿಲ್ಲ. 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು, ಎರಡು ಕೋಟಿ ಉದ್ಯೋಗ ನೀಡಲಾಗಿದೆಯೇ? 10 ವರ್ಷದಲ್ಲಿ ಒಂದೇ ಒಂದು ಉದ್ಯೋಗ ನೀಡಿಲ್ಲ. ಸ್ಮಾರ್ಟ್ ಸಿಟಿ ಎಷ್ಟು ಅಭಿವೃದ್ದಿ ಮಾಡಿದ್ದಾರೆ ಉತ್ತರಿಸಲಿ ಎಂದರು.

ಬಿಜೆಪಿ ಪಕ್ಷದ ಅನುರಾಗ್ ಠಾಕೂರ್ ಹೇಳುತ್ತಾರೆ ʼಮೋದಿ ವಿರುದ್ದ ಮಾತನಾಡಿದವರಿಗೆ ಗುಂಡಿಕ್ಕಿ ಕೊಲ್ಲಿʼ ಎಂದು ಜವಾಬ್ದಾರಿಯುತ ಸಚಿವರ ಮಾತೇ ಅದು. ಅವರನ್ನು ವಜಾ ಮಾಡುವ ಶಕ್ತಿ ನಿಮ್ಮ ಬಳಿ ಇಲ್ಲವೇ? ಪ್ರಜ್ಞಾಸಿಂಗ್ ಠಾಕೂರ್ ಶಿವಮೊಗ್ಗಕ್ಕೆ ಬಂದಾಗ “ನಿಮ್ಮ ಮನೆಯ ಚಾಕೂ ಚೂರಿ, ಬಂದೂಕು ತಯಾರು ಮಾಡಿಟ್ಟುಕೊಳ್ಳಿʼ ಎಂದಿದ್ದರು. ನಿಮ್ಮದು ಸಂಸ್ಕೃತಿಯ ಮಾತೆ?. ನನಗೆ ಬಿಜೆಪಿಯ ಭಾಷೆಯಲ್ಲೂ ಮಾತನಾಡಲು ಬರುತ್ತದೆ. ಕನ್ನಡ ಸಂಸ್ಕೃತಿ ಸಚಿವನಾದ ನನಗೆ ನನ್ನ ತಂದೆ- ತಾಯಿ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಲೂಟಿ ರವಿ ಅವರೆ. ಸಿದ್ದರಾಮಯ್ಯ ಅವರು, ಶಿವಕುಮಾರ್ ಅವರು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಸಂಸ್ಕೃತಿ ಕಲಿಸಿದ್ದಾರೆ ಎಂದರು.

 

Related