ಹನಿ, ಹನಿ, ನೀರ ಹನಿಯೂ… ಗುಲಾಬಿಯೂ…

  • In State
  • March 23, 2020
  • 224 Views
ಹನಿ, ಹನಿ, ನೀರ ಹನಿಯೂ… ಗುಲಾಬಿಯೂ…

ಮಾ. 23 : ನೀವು ತುಂಬಾ ಸೆನ್ಸಿಟಿವ್ ಕಣ್ರಿ. ಸಣ್ಣ ಪುಟ್ಟದ್ದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಂಡು ಕೊರಗ್ತೀರಿ’ ಎಂಬ ಹಿತವಚನವನ್ನು ನೂರಾರು ಬಾರಿ ಕೇಳಿರುತ್ತೀರಿ, ಇಲ್ಲವೇ ಮತ್ತೊಬ್ಬರಿಗೆ ನೀವೇ ಹೇಳಿರುತ್ತೀರಿ. ಅಂಥ ಸಂದರ್ಭಗಳಲ್ಲಿ ಆ ಹಿತೈಷಿಗಳು ತಪ್ಪದೇ ಹೇಳುವ ಮತ್ತೊಂದು ಮಾತಿದೆ. ಯಾವತ್ತೂ ನೀವು `ಪದ್ಮಪತ್ರದ ಮೇಲಿನ ನೀರ ಹನಿಗಳಂತೆ ಇರಬೇಕು ರೀ. ಆಗ ಮನಸ್ಸಿಗೆ ಯಾವ ತೊಂದರೆಯೂ ಆಗೋದಿಲ್ಲ’. ತಾವರೆ ಎಲೆಯ ಮೇಲೆ ನೀರು ಏಕೆ ನಿಲ್ಲುವುದಿಲ್ಲ ಎಂಬುದು ನಿಮಗೆ ಗೊತ್ತಿರಬಹುದು. ಅದರ ಎಲೆಯ ಮೇಲ್ಮೈ ತರಿತರಿಯಾಗಿದ್ದು, ಮೇಲೆ ವಿಶಿಷ್ಟ ಮೇಣವೊಂದರ ಲೇಪನವಿರುವುದರಿಂದ ತಾವರೆ ಎಲೆಯು ತನ್ನ ಮೇಲೆ ಬಿದ್ದ ನೀರ ಹನಿಯನ್ನು ಮಣಿಯ ರೂಪದಲ್ಲಿರುವಂತೆ ಪ್ರೇರೇಪಿಸುತ್ತದೆ. ಆ ಹನಿಯು ಎಲೆಗೆ ಅಂಟಿಕೊಳ್ಳದೆಯೇ ಜಾರಿಹೋಗುವಂತೆ ಮಾಡುತ್ತದೆ.
ಇದರ ತದ್ವಿರುದ್ಧ ಗುಣ ಗುಲಾಬಿಯ ಪಕಳೆಗಳಿಗಿರುತ್ತವೆ. ಅಂದರೆ ತನ್ನ ಮೇಲಿನ ನೀರ ಹನಿಗಳನ್ನು ಎಷ್ಟೇ ಕೊಡವಿದರೂ ಅಂಟಿಸಿಟ್ಟುಕೊಳ್ಳುವ ಗುಣ ಗುಲಾಬಿ ಹೂವಿನ ಪಕಳೆಗಳದು.ಪದ್ಮ ಪತ್ರದ ಮೇಲೆ ನೀರ ಹನಿಗಳು ನಿಲ್ಲೋದಿಲ್ಲ. ಅದೇ ಗುಲಾಬಿ ಪಕಳೆಗಳ ಮೇಲೆ ನೀರ ಹನಿ ಬಿದ್ದರೆ `ಪ್ಯಾರ್ಗೇ ಆಗ್ಬಿಟ್ಟೈತೆ, ನಮ್ದೂಕೆ …’ ಎನ್ನುತ್ತಾ ಒಂದನ್ನೊಂದು ಅವು ಬಿಡೋದೇ ಇಲ್ಲ!
ತಾವರೆ ಎಲೆಯ ಗುಣಗಳನ್ನು `ಜೈವಿಕ ಅಣಕು’ (ಬಯೋ ಮಿಮಿಕ್ರಿ) ಮಾಡಿ, ಲೋಹಗಳಿಗೆ ಅಂಟುಕೊಳ್ಳದ ಗುಣ ನೀಡುವಂಥ ಲೇಪನಗಳನ್ನು ತಯಾರಿಸುತ್ತಿರುವ ಬಗ್ಗೆ ನೀವು ಕೇಳಿರಬಹುದು. ಇದೀಗ ಗುಲಾಬಿ ಹೂವಿನ ಪಕಳೆಗಳ ದ್ರವ-ಪ್ರಿಯ ಗುಣಕ್ಕೆ ಕಾರಣವೇನೆಂದು ಕಂಡು ಹಿಡಿದು, ಲೋಹವೂ ಸೇರಿದಂತೆ ಅನೇಕ ಎಂಜಿನೀರಿಂಗ್ ಸಾಮಗ್ರಿಗಳಿಗೆ ಹಚ್ಚುವಂಥ ವಿಶಿಷ್ಟ ಲೇಪನಗಳನ್ನು ಸೃಷ್ಟಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ, ಯಶಸ್ವಿಯೂ ಆಗಿವೆ.

ಗುಲಾಬಿ ಪಕಳೆಗಳು ನೀರ ಹನಿಗಳನ್ನು ತೀವ್ರವಾಗಿ ಅಂಟಿಸಿಕೊಳ್ಳುವುದೇಕೆಂದು ವಿಜ್ಞಾನಿಗಳು ಈಗಾಗಲೇ ಕಂಡುಕೊಂಡಿದ್ದಾರೆ. ಹಾಗೆಯೇ ಗುಲಾಬಿ ಪಕಳೆಗಳ ಮೇಲ್ಮೈ ರಚನೆಯ ಯಾವ ಬದಲಾವಣೆಗಳು ಅವನ್ನು ಹೀಗೆ ವರ್ತಿಸುವಂತೆ ಮಾಡುತ್ತವೆಂಬುದನ್ನೂ ಅರಿತಿದ್ದಾರೆ.

Related