ರಾಜ್ಯ ಸರ್ಕಾರದಿಂದ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಸಿಹಿ ಸುದ್ದಿ

ರಾಜ್ಯ ಸರ್ಕಾರದಿಂದ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಸಿಹಿ ಸುದ್ದಿ

ಬೆಂಗಳೂರ : ಹಬ್ಬ ಹರಿದಿನ ಎನ್ನದೆ ತಮ್ಮ ಕರ್ತವ್ಯವೇ ದೇವರು ಎಂದು ನಂಬಿ ಪ್ರತಿನಿತ್ಯ ಕಾರ್ಯನಿರ್ವಹಿಸುವ ಕೆಎಸ್ಆರ್ಟಿಸಿ ಚಾಲಕ ಮತ್ತು ನಿರ್ವಾಹಕರುಗಲಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಹೌದು, ಕೆಎಸ್ಆರ್ಟಿಸಿ ನೌಕರರಿಗೆ ಹೃದಯ ಸಂಬಂಧಿ ತಪಾಸಣೆ ಮಾಡಿಸಲು ಮುಂದಾಗಿದ್ದು, ಈಗಾಗಲೇ ಜಯದೇವ ಆಸ್ಪತ್ರೆಯೊಂದಿಗೆ ಐದು ವರ್ಷಗಳವರೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಮೂಲಕ ಸಾರಿಗೆ ನೌಕರರಿಗೆ ಯಾವುದೇ ರೀತಿಯ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಕುರಿತು ತಪಾಸಣೆಯನ್ನು ನಡೆಸಿ ಚಿಕಿತ್ಸೆ ಒದಗಿಸಲಿದೆ. ಇದರಿಂದ ಸಾವಿರಾರು ನೌಕರರಿಗೆ ಅನುಕೂಲವಾಗಲಿದೆ.

KSRTCಯ ಸಮಸ್ತ ಸಿಬ್ಬಂದಿಗೆ ಹತ್ತು ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು 5 ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯವರೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ.

ನಿಗಮವು “ಆರೋಗ್ಯವಂತ ನೌಕರರೇ ಸಂಸ್ಥೆಯ ಆಸ್ತಿ” ಎಂದು ಪರಿಗಣಿಸಿದೆ. ನಿಗಮದಲ್ಲಿ ಒಟ್ಟು 34000 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಆ ಪೈಕಿ 24686 ಮಂದಿ ಚಾಲಕ ಮತ್ತು ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಗಮದ ನೌಕರರ ಕಾರ್ಯಸ್ವರೂಪ, ಜೀವನಶೈಲಿ ಮತ್ತು ಇತರೆ ಕಾರಣಗಳಿಂದಾಗಿ ನೌಕರರಲ್ಲಿ ಹೃದಯಾಘಾತ/ ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾಗಿದೆ. ಅದರಲ್ಲೂ, 40 ವರ್ಷ ಮೇಲ್ಪಟ್ಟ ಚಾಲಕರು, ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ.

ಈ ಸಂಬಂಧ, ನಿಗಮದ ಸಮಸ್ತ ಸಿಬ್ಬಂದಿಗಳನ್ನು ಹೃದಯ ಸಂಬಂಧಿಸಿದ ನಿರ್ಧಿಷ್ಟವಾದ ಪರೀಕ್ಷೆ/ ತಪಾಸಣೆಗಳಿಗೆ ಒಳಪಡಿಸುವ ಅವಶ್ಯಕತೆ ಮನಗಂಡು, ನೌಕರರಲ್ಲಿ ಜಾಗೃತಿ/ ಅರಿವು ಮೂಡಿಸಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಅನುವಾಗುವ ಉದ್ದೇಶದಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಹೃದಯ ಸಂಬಂಧಿ ಹತ್ತು ಇತರೆ ವೈದ್ಯಕೀಯ ತಪಾಸಣೆಗಳನ್ನು ನೌಕರರಿಗೆ ಮಾಡಿಸಲು ತೀರ್ಮಾನಿಸಿ, ಮುಂದಿನ ಐದು ವರ್ಷಗಳ ಅವಧಿಯ ಒಡಂಬಡಿಕೆಯನ್ನು ದಿನಾಂಕ: 02.11.2023 ರಂದು ಮಾಡಿಕೊಳ್ಳಲಾಯಿತು ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ನಿಗಮವು ಒಡಂಬಡಿಕೆ ಮಾಡಿಕೊಂಡಿದ್ದು, ಹೃದಯ ಸಂಬಂಧಿ ತಪಾಸಣೆಗಳನ್ನು/ ಪರೀಕ್ಷೆಗಳನ್ನು ನಿರಂತರವಾಗಿ ಮಾಡಿಸುವುದರಿಂದ ಸಂಭವನೀಯ ಹೃದಯಾಘಾತವನ್ನು ತಪ್ಪಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಜೀವಗಳ ರಕ್ಷಣೆ ಆಗುತ್ತದೆ ಎಂದು ತಿಳಿಸಿದರು.

ಈಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ನಿರ್ದೇಶಕರು (ಸಿ ಮತ್ತು ಜಾ) ಡಾ. ನಂದಿನಿ ದೇವಿ. ಕೆ, ಸಹಿತ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Related