ನಾಳೆ ಎಲ್ಲಾ ಪೌರ ಕಾರ್ಮಿಕರಿಗೆ ಕೊರೊನಾ ಲಸಿಕೆ

ನಾಳೆ ಎಲ್ಲಾ ಪೌರ ಕಾರ್ಮಿಕರಿಗೆ ಕೊರೊನಾ ಲಸಿಕೆ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರು ನಾಳೆ ತಪ್ಪದೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

ಘನತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರು, ಆಟೋ, ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ ಚಾಲಕರು ನಾಳೆ ತಮ್ಮ 2ನೆ ಮಸ್ಟರಿಂಗ್ ಕಾರ್ಯ ಪೂರ್ಣಗೊಂಡ ಕೂಡಲೇ ಸ್ಥಳೀಯ ಅರೋಗ್ಯ ಕೇಂದ್ರಗಳಿಗೆ ತೆರಳಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಲಸಿಕೆ ಪಡೆದವರಿಗೆ ಅರ್ಧ ದಿನ ವೇತನ ಸಹಿತ ರಜೆ ಮಂಜೂರು ಮಾಡಲಾಗುವುದು. ಲಸಿಕೆ ಹಾಕಿಸಿಕೊಳ್ಳದೆ ಇರುವ ನೌಕರರು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ರಜೆ ದಿನವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಬರುವ ಪೌರಕಾರ್ಮಿಕರಿಗೆ ಆರೋಗ್ಯ ಕೇಂದ್ರಗಳಲ್ಲಿರುವ ಆರೋಗ್ಯಾಧಿಕಾರಿಗಳು ಎಲ್ಲರ ಸ್ಕ್ರೀನಿಂಗ್ ನಡೆಸಿ ಕೊರೊನಾ ಲಸಿಕೆ ಹಾಕಬೇಕು ಎಂದು ಆಯುಕ್ತರು ಸಲಹೆ ನೀಡಿದ್ದಾರೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತಾ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದು, ಇದುವರೆಗೂ ಯಾವುದೇ ಅಡ್ಡ ಪರಿಣಾಮ ಬೀರಿಲ್ಲ. ಹೀಗಾಗಿ ಪ್ರತಿಯೊಬ್ಬ ಪೌರ ಕಾರ್ಮಿಕರು ನಾಳೆ ತಪ್ಪದೆ ಲಸಿಕೆ ಹಾಕಿಸಿಕೊಳ್ಳುವಂತೆ ಪೌರ ಕಾರ್ಮಿಕ ಮುಖಂಡ ಶ್ರೀನಿವಾಸ್ ಮನವಿ ಮಾಡಿಕೊಂಡಿದ್ದಾರೆ.

Related