ಬಿಜೆಪಿ-ಜೆಡಿಎಸ್ ದೊಡ್ಡ ಷಡ್ಯಂತ್ರ ನಡೆಸುತ್ತಿದೆ: ಡಿಕೆಶಿ

ಬಿಜೆಪಿ-ಜೆಡಿಎಸ್ ದೊಡ್ಡ ಷಡ್ಯಂತ್ರ ನಡೆಸುತ್ತಿದೆ: ಡಿಕೆಶಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ಭರ್ಜರಿ ತನಿಖೆಯನ್ನು ಕೈಗೊಂಡಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಬಿಜೆಪಿ ಕಾರ್ಯಕರ್ತ ದೇವರಾಜ ಗೌಡ ಅವರು ಡಿಸಿಎಂ ವಿರುದ್ಧ ಆರೋಪ ಮಾಡಿದ್ದಾರೆ.

ಇನ್ನು ಆರೋಪಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು ಹಾಗೂ ಆಧಾರರಹಿತ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ದೇವರಾಜೇಗೌಡ ಹಿಂದೆ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದವರು. ಆ ಪಕ್ಷದ ಸಕ್ರಿಯ ಕಾರ್ಯಕರ್ತ. ಈಗ ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಜತೆಗೆ ಅದರ ಮಿತ್ರ ಪಕ್ಷ ಬಿಜೆಪಿಗೂ ಬಹಳ ಮುಜುಗರ ಮತ್ತು ಮುಖಭಂಗ ಆಗಿದೆ. ಈಗ ಆಗಿರುವ ಡ್ಯಾಮೇಜ್ ನಿವಾರಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ನಾಯಕರು ದೇವರಾಜೇಗೌಡನ ಮೂಲಕ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದ್ದಾರೆ ಎಂದು ಶಿವಕುಮಾರ್ ಅವರು ಅಪಾದಿಸಿದ್ದಾರೆ.

ಇದೇ ದೇವರಾಜೇಗೌಡ ಈ ಹಿಂದೆಯೇ ತಮ್ಮಲ್ಲಿ ಪೆನ್ ಡ್ರೈವ್ ಇರುವ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದರು. ಬಿಜೆಪಿ ನಾಯಕರ ಅನುಮತಿ ಪಡೆದು ಅದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಹೀಗಿರುವಾಗ ನನಗೂ ಪೆನ್ ಡ್ರೈವ್ ಬಿಡುಗಡೆಗೂ ಏನು ಸಂಬಂಧ? ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ದೇವರಾಜೇಗೌಡ ಮಾಡೋದೆಲ್ಲ ಮಾಡಿ ಈಗ ನನ್ನ ವಿರುದ್ಧ ಅಪಾದನೆ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಷಡ್ಯಂತ್ರ ಇದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

ನಾನೀಗ ಬೆಂಗಳೂರಿಂದ ಹೊರಗೆ ಇದ್ದು, ಬಂದ ನಂತರ ಈ ಬಗ್ಗೆ ಮಾತಾಡುತ್ತೇನೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related