ಬೆಂಗಳೂರಿಗೆ ತಟ್ಟಿದ ಬಂದ್‌ ಬಿಸಿ

ಬೆಂಗಳೂರಿಗೆ ತಟ್ಟಿದ ಬಂದ್‌ ಬಿಸಿ

ಬೆಂಗಳೂರು, ಸೆ.11: ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಆಟೋ ಟ್ಯಾಕ್ಸಿ ಚಾಲಕರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಮೆರವಣಿಗೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರ್ಯಾಪಿಡೋ ಬೈಕ್, ಉಬರ್ ಬೈಕ್ ಟ್ಯಾಕ್ಸಿ ವಿರುದ್ಧವೂ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಂದ್ ಕರೆ ಹಿನ್ನಲೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಯುತ್ತದೆ. ಈ ರ‍್ಯಾಲಿಯಲ್ಲಿ 8 ರಿಂದ 10 ಸಾವಿರ ಚಾಲಕರು ಮಾಲೀಕರು ಭಾಗಿ ಆಗುವ ಸಾಧ್ಯತೆ ಇದೆ.

ಖಾಸಗಿ ಸಾರಿಗೆ ಸಂಸ್ಥೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, 10 ಸಾವಿರಕ್ಕು ಹೆಚ್ಚು ಚಾಲಕರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಕ್ತಿ ಯೋಜನೆಗೆ ವಿರೋಧ, ರ್ಯಾಪಿಡ್ ಆಟೋ-ಬೈಕ್ ಸೇವೆಗೆ ವಿರೋಧ, ಆಟೋ ಚಾಲಕರಿಗೆ ತಿಂಗಳಿಗೆ 10 ಸಾವಿರ ಕೊಡಬೇಕು ಎಂಬ ಬೇಡಿಕೆ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Related