14 ಬಾರಿ ಅಂಬಾರಿಯನ್ನು ಹೊತ್ತಿದ್ದ ಬಲರಾಮ ಇನ್ನಿಲ್ಲ

14 ಬಾರಿ ಅಂಬಾರಿಯನ್ನು ಹೊತ್ತಿದ್ದ ಬಲರಾಮ ಇನ್ನಿಲ್ಲ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರೆಯಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಭಾನುವಾರ ಕೊನೆಯುಸಿರೆಳೆದಿದ್ದಾನೆ. ತೀವ್ರ ಅಸ್ವಸ್ಥಗೊಂಡಿದ್ದ ಬಲರಾಮ ಆನೆಗೆ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ಬರೋಬ್ಬರಿ 14 ಬಾರಿ ಅಂಬಾರಿಯನ್ನು ಹೊತ್ತಿದ್ದ ಸೌಮ್ಯ ಸ್ವಭಾವದ ಬಲರಾಮನ ಬಾಯಕಲ್ಲಿ ಹುಣ್ಣಾಗಿತ್ತು. ಕಳೆದ ಹತ್ತು ದಿನಗಳಿಂದ ನೋವಿನಿಂದ ಬಳಲುತ್ತಿದ್ದ ಬಲರಾಮನಿಗೆ ಆಹಾರ ಸೇವನೆ ಕಷ್ಟವಾಗುತ್ತಿತ್ತು. ಇಂದು ಅಸ್ವಸ್ಥಗೊಂಡಿದ್ದನು. ಕೂಡಲೇ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

ವಿಶ್ವ ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆಯ ಪ್ರಮುಖ ಆನೆಗಳಲ್ಲಿ ಬಲರಾಮನೂ ಒಬ್ಬನಾಗಿದ್ದ. ಬಲರಾಮನನ್ನು 1987 ರಲ್ಲಿ ಕರ್ನಾಟಕದ ಕೊಡಗು ಪ್ರದೇಶದ ಸೋಮವಾರಪೇಟೆ ಬಳಿಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು. ನಂತರ ಈತನನ್ನು ತರಬೇತಿ ಮೂಲಕ ಪಳಗಿಸಲಾಗಿತ್ತು. ದ್ರೋಣನ ನಂತರ ಅಂಬಾರಿಯನ್ನು ಹೊರಲು ಬಲರಾಮ ಆಯ್ಕೆಯಾದನು. ಆದರೆ ಅಂಬಾರಿ ಹೊರಲು ಬಲರಾಮ ಮೊದಲ ಆಯ್ಕೆಯಾಗಿರಲಿಲ್ಲ. 5,600 ಕಿಲೋ ತೂಕ ಇರುವ ಆನೆ ಅರ್ಜುನ, ಆಕಸ್ಮಿಕವಾಗಿ ಮಾವುತನನ್ನು ಕೊಂದಿದ್ದಕ್ಕಾಗಿ ಅಂಬಾರಿ ಹೊರುವ ಅವಕಾಶದಿಂದ ವಂಚಿತನಾಗಿದ್ದನು. ಹೀಗಾಗಿ ಬಲರಾಮನನ್ನು ಆಯ್ಕೆ ಮಾಡಲಾಯಿತು. ಅದರಂತೆ 1999 ಮತ್ತು 2011 ರ ನಡುವೆ ಒಟ್ಟು 14 ಬಾರಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ್ದನು.

 

 

Related