ಬ್ಯಾಡಗಿ ಮೆಣಸಿನಕಾಯಿ ಬಲು ದುಬಾರಿ

ಬ್ಯಾಡಗಿ ಮೆಣಸಿನಕಾಯಿ ಬಲು ದುಬಾರಿ

ಬೆಂಗಳೂರು, ಮಾ.11 : ಬ್ಯಾಡಗಿ ಮೆಣಸಿನಕಾಯಿ ದರ ಗಣನೀಯ ಏರಿಕೆ ಕಂಡಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಈ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಬ್ಯಾಡಗಿ ಹೆಸರಿನಿಂದಲೇ ಕರೆಯಲಾಗುತ್ತದೆ. ಹಾವೇರಿ ಜೊತೆಗೆ ಧಾರವಾಡ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲೂ ಇದನ್ನು ಬೆಳೆಯುತ್ತಾರೆ. ಹುಬ್ಬಳ್ಳಿ–ಧಾರವಾಡ ಭಾಗದ ಮೆಣಸಿಗೆ ಬೇಡಿಕೆ ಹೆಚ್ಚು. ತೊಟ್ಟು, ತೊಟ್ಟುರಹಿತ ಮೆಣಸಿನ ತೂಕದಲ್ಲಿ ವ್ಯತ್ಯಾಸ ಇರುತ್ತದೆ. 1 ಕೆ.ಜಿ ತೊಟ್ಟುಸಹಿತ ಮೆಣಸಿನಲ್ಲಿ ತೊಟ್ಟಿನ ತೂಕವೇ 200 ಗ್ರಾಂಗಳಷ್ಟಿರುತ್ತದೆ. ದಾಸ್ತಾನು ಕೊರತೆ, ಹೆಚ್ಚಿದ ಬೇಡಿಕೆಯಿಂದ ಬೆಲೆ ದುಪ್ಪಟ್ಟಾಗಿದೆ. ರೈತರು, ವ್ಯಾಪಾರಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಬ್ಯಾಡಗಿ ಮೆಣಸಿನಕಾಯಿ ಕಡುಕೆಂಪು ಬಣ್ಣದಿಂದ ಕೂಡಿರುತ್ತದೆ. ಖಾರ ತುಸು ಕಡಿಮೆ. ಉಳಿದ ಮೆಣಸಿನಕಾಯಿಗಳಂತೆ ಬೇಗನೆ ಹಾಳಾಗುವುದಿಲ್ಲ. ಈ ಎಲ್ಲ ವೈಶಿಷ್ಟ್ಯಗಳಿಂದ ಇತರ ಮೆಣಸಿನಕಾಯಿಗಳ ದರಕ್ಕಿಂತ ಬ್ಯಾಡಗಿ ದರ ಜಾಸ್ತಿ.
ಕ್ವಿಂಟಲ್ಗೆ ಹೆಚ್ಚೆಂದರೆ ₹10 ಸಾವಿರದಿಂದ ₹15 ಸಾವಿರ ಇರುತ್ತಿದ್ದ ಬ್ಯಾಡಗಿ ಮೆಣಸಿನ ದರ, 20 ದಿನಗಳಿಂದ ಏರುತ್ತಲೇ ಸಾಗಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹25 ಸಾವಿರದಿಂದ ₹35 ಸಾವಿರದಷ್ಟಿತ್ತು. ಉತ್ತಮ ಗುಣಮಟ್ಟದ ಬ್ಯಾಡಗಿ ಮೆಣಸು ಕ್ವಿಂಟಲ್ಗೆ ₹43 ಸಾವಿರದಂತೆ ಮಾರಾಟವಾಯಿತು. ಹೊಸ ಬೆಳೆ ಬರುವವರೆಗೂ ದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

Related