ಹಣ ಕಬಳಿಸಲು ತರಾತುರಿಯಲ್ಲಿ ಅಮೃತ್‌ ನಗರೋತ್ಥಾನ : ಎಎಪಿ

ಹಣ ಕಬಳಿಸಲು ತರಾತುರಿಯಲ್ಲಿ ಅಮೃತ್‌ ನಗರೋತ್ಥಾನ : ಎಎಪಿ

ಅಮೃತ್‌ ನಗರೋತ್ಥಾನ ಯೋಜನೆ ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಬಿಜೆಪಿಯ 40% ಸರ್ಕಾರವು ತರಾತುರಿಯಲ್ಲಿ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್‌ ದಾಸರಿ, “ಅಮೃತ್‌ ನಗರೋತ್ಥಾನ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 6,000 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ಬೆಂಗಳೂರಿನ 28 ಶಾಸಕರಿಗೆ ಒಟ್ಟು 3,850 ಕೋಟಿ ರೂ. ಬಿಡುಗಡೆಯಾಗಿದೆ. ಬಿಜೆಪಿ ಶಾಸಕರಿಗೆ ಭಾರೀ ಮೊತ್ತ, ಕಾಂಗ್ರೆಸ್‌-ಜೆಡಿಎಸ್‌ ಶಾಸಕರಿಗೆ ಅತೀ ಕಡಿಮೆ ಮೊತ್ತ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ. ಬರೋಬ್ಬರಿ 2,718 ಕೋಟಿ ರೂಪಾಯಿಯನ್ನು ಬಿಜೆಪಿ ಶಾಸಕರಿಗೆ ನೀಡಲಾಗಿದೆ. ಅಮೃತ್‌ ನಗರೋತ್ಥಾನ ಯೋಜನೆಯು ಬಿಜೆಪಿ ಪಾಲಿಗೆ ಮಾತ್ರ ಅಮೃತವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹಾಗೂ ಬೆಂಗಳೂರಿಗೆ ವಿಷವಾಗುತ್ತಿದೆ” ಎಂದು ಹೇಳಿದರು.

“ನಾಡಿನ ಇತಿಹಾಸ ಕಂಡ ಅತ್ಯಂತ ಭ್ರಷ್ಟ ಸರ್ಕಾರವೆಂದರೆ ಈಗಿನ 40% ಬಿಜೆಪಿ ಸರ್ಕಾರ. ಸಾಧ್ಯವಾದಲ್ಲೆಲ್ಲ ಜನರ ಹಣವನ್ನು ಲೂಟಿ ಮಾಡುವುದರಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ನಿರತವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರವನ್ನು ಪ್ರೋತ್ಸಾಹಿಸಿ, ಅದರಲ್ಲಿ ಸಿಂಹಪಾಲು ಪಡೆಯುವುದಕ್ಕೆಂದೇ ಬಿಜೆಪಿ ಸರ್ಕಾರವು ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಿತ್ತು. ಜನರು ಹಾಗೂ ಮಾಧ್ಯಮಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ ಹೆದರಿ ಆದೇಶವನ್ನು ಹಿಂಪಡೆದಿದೆ” ಎಂದು ಮೋಹನ್‌ ದಾಸರಿ ಹೇಳಿದರು.

 

Related