ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ

ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ

ಕೆಲವರು ಬೇಕಂತಲೇ ಕೃತಕವಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಅಭಾವ ಸೃಷ್ಟಿಸುತ್ತಿದ್ದಾರೆ. ಹೀಗೆ ಕೃತಕವಾಗಿ ಯಾರಾದರೂ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಸೋಮವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಕಾಲಕ್ಕೆ ರಸಗೊಬ್ಬರ ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತನಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದರು.

ಬಿತ್ತನೆ ಬೀಜ ವಿತರಣೆ: ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆಯಡಿ ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಉದ್ದು, ಹೆಸರು, ಕಡಲೆ, ಅಲಸಂದೆ, ನೆಲಗಡಲೆ, ಸೋಯಾವರೆ, ಸೂರ್ಯಕಾಂತಿ, ಗೋದಿ, ಕುಸುಬೆ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ ಸಕಾಲದಲ್ಲಿ ಹೋಬಳಿ ಮಟ್ಟದಲ್ಲಿಯೇ ಉತ್ತಮ ಬಿತ್ತನೆ ಬೀಜಗಳು ಲಭ್ಯವಾಗುವಂತೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಗುರುತಿಸಿದ ಹೆಚ್ಚುವರಿ ಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿಯೇ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ರಾಜ್ಯ  ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಉಪಸ್ಥಿತರಿದ್ದರು.

 

 

 

 

Related