ಸಿಲಿಕಾನ್‌ ಸಿಟಿಗೆ ಮತ್ತೆ 1400 ಎಲೆಕ್ಟ್ರಿಕ್ ಬಸ್ ಗಳು!

ಸಿಲಿಕಾನ್‌ ಸಿಟಿಗೆ ಮತ್ತೆ 1400 ಎಲೆಕ್ಟ್ರಿಕ್ ಬಸ್ ಗಳು!

ಬೆಂಗಳೂರು: 2024ನೇ ಎಪ್ರಿಲ್ ತಿಂಗಳಲ್ಲಿ ಮತ್ತೆ ಹೊಸದಾಗಿ 1400 ಹೊಸ ಎಲೆಕ್ಟ್ರಿಕ್ ಬಸ್ ಗಳು ಕರ್ನಾಟಕ ರಾಜ್ಯಧಾನಿ ಬೆಂಗಳೂರಿಗೆ ಆಧಾರ್ಪಣೆ ಮಾಡುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇಂದು (ಡಿ. 26 ಮಂಗಳವಾರ) ವಿಧಾನಸೌಧದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ100 ವಿದ್ಯುತ್ ಚಾಲಿತ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇಲ್ಲಿಯವರೆಗೂ ರಾಜ್ಯ ಸಾರಿಗೆಯ ಬಸ್ ಗಳಲ್ಲಿ 120 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ನಿತ್ಯ 40 ಲಕ್ಷ ಜನ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರಲ್ಲಿ ಎಲ್ಲ ಜಾತಿ, ಎಲ್ಲ ಧರ್ಮದ, ಎಲ್ಲ ಅಂತಸ್ತಿನ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ.

ಉಚಿತ ಬಸ್ ಪ್ರಯಾಣವನ್ನು ಬಿಜೆಪಿ ಯವರು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿ ಯವರು ತಾವು ಅಧಿಕಾರದಲ್ಲಿದ್ದಾಗ ಈ ಜನೋಪಯೋಗಿ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಸಿ.ಎಂ ಪ್ರಶ್ನಿಸಿದರು.

ನಮ್ಮ ಗ್ಯಾರಂಟಿಗಳಿಂದ ಕಾರ್ಮಿಕ ಮತ್ತು ರೈತ ಮಹಿಳೆಯರು, ದುಡಿಯುವ ವರ್ಗಗಳ ಮಹಿಳೆಯರಿಗೆ ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದೆ. ಆ ಹಣವನ್ನು ತಮ್ಮ ಕುಟುಂಬದ ಇತರೆ ಅಗತ್ಯಗಳಿಗೆ ಬಳಸುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಶಕ್ತಿಯೂ ಹೆಚ್ಚುತ್ತಿದೆ ಎಂದು ಸರ್ಕಾರದ ಜನೋಪಯೋಗಿ ಯೋಜನೆಯ ಪರಿಣಾಮಕಾರಿ ಫಲಿತಾಂಶವನ್ನು ವಿವರಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕ್ರೀಡಾ ಸಚಿವ ನಾಗೇಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ವಿಧಾನ‌ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Related