ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ ರಾಜ್ಯ ವನ್ಯಜೀವಿ ಮಂಡಳಿ

ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ ರಾಜ್ಯ ವನ್ಯಜೀವಿ ಮಂಡಳಿ

ಕೊಪ್ಪಳ : ಜಿಲ್ಲೆಯ ಬಂಕಾಪುರ ಪ್ರದೇಶ ಉತ್ತಮವಾಗಿದೆ. ಈ ಹಿನ್ನಲೆ ಇಲ್ಲಿನ ಬಂಕಾಪುರದ ಒಣ ಪ್ರದೇಶದ ಸುಮಾರು 822. 03 ಎಕರೆ ಪ್ರದೇಶದಲ್ಲಿ ಬಂಕಾಪುರ ತೋಳ ಅಭಯಾರಣ್ಯ ನಿರ್ಮಾಣ ಮಾಡಲು ಸೂಕ್ತವಾಗಿದ್ದು, ಇದಕ್ಕೆ ಅನುಮೋದಿಸುವಂತೆ ಸರ್ಕಾರದ ಮುಂದೆ ಮಂಡಳಿ ಪ್ರಸ್ತಾಪ ಸಲ್ಲಿಸಿದೆ.

ಬೂದು ಬಣ್ಣದ ತೋಳಗಳ ಸಂರಕ್ಷಣೆಗಾಗಿ ರಾಜ್ಯ ವನ್ಯಜೀವಿ ಮಂಡಳಿ ಕಲ್ಯಾಣ ಕರ್ನಾಟಕದಲ್ಲಿ ತೋಳಗಳ ಅಭಯಾರಣ್ಯ ನಿರ್ಮಿಸುವ ಉದ್ದೇಶ ಹೊಂದಿದೆ.

ಈ ಪ್ರದೇಶವೂ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗೆ ಜಿಲ್ಲೆಯಲ್ಲಿ ಉತ್ತಮ ಪರಿಸರವನ್ನು ಹೊಂದಿದೆ. ತೋಳಗಳು ಮಾತ್ರವಲ್ಲದೇ ಪಟ್ಟೆ ಹೈನಾ, ಭಾರತದ ನರಿ, ಚಿನ್ನದ ನರಿ ಮತ್ತು ಇತರೆ ಪ್ರಾಣಿಗಳ ಸಂರಕ್ಷಣೆಗೆ ಇದು ಉತ್ತಮವಾಗಿದೆ ಎಂದು ಮಂಡಳಿ ಪ್ರಸ್ತಾಪದಲ್ಲಿ ತಿಳಿಸಿದೆ.

ಈ ಮೊದಲು ಮಂಡ್ಯದ ಮೇಲುಕೋಟೆ ಪ್ರದೇಶವು ತೋಳಗಳಿಗೆ ಸಂರಕ್ಷಿತ ಪ್ರದೇಶವೆಂದು ಹೇಳಲಾಗುತ್ತಿತ್ತು. ಈ ಹಿನ್ನಲೆ ಮೈಸೂರು ಮಹಾರಾಜರು ಮೇಲುಕೋಟೆ ತೋಳ ಅಭಯಾರಣ್ಯವನ್ನು ಸ್ಥಾಪಿಸಿದ್ದರು ಇಲ್ಲಿಗೆ ಬಲವಂತವಾಗಿ ವಲಸೆ ಬಂದ ತೋಳಗಳು ನೀರಿನ ಕೊರತೆಯನ್ನು ಎದುರಿಸಿದವು. ಇದರಿಂದಾಗಿ ಇಲ್ಲಿನ ತೋಳಗಳನ್ನು ಕೊಪ್ಪಳ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು ಎಂದು ವರದಿ ತಿಳಿಸಿದೆ.

ಜಿಲ್ಲೆಯ ಬಂಕಾಪುರ, ಮಲ್ಲಾಪುರ ಮತ್ತು ಸುಲೇಕಲ್ ಗ್ರಾಮದಲ್ಲಿ ಕಲ್ಲು ಗುಡ್ಡಗಳು ಹಾಗೂ ಮುಳ್ಳಿನ ಸಸ್ಯವರ್ಗಗಳಿವೆ. ಭಾರತೀಯ ಬೂದು ಬಣ್ಣದ ತೋಳಗಳು ವಾಸಿಸಲು ದಖನ್ ಪ್ರಸ್ಥಭೂಮಿಯ ಹುಲ್ಲುಗಾವಲು ಪ್ರದೇಶಗಳು ಸೂಕ್ತ ಎಂದು ಮಂಡಳಿ ಸದಸ್ಯರು ತಿಳಿಸಿದ್ದಾರೆ.

Related