ಇದು ಮೋದಿ ಅವರ ಹ್ಯಾಟ್ರಿಕ್ ಚುನಾವಣೆ: ಮಂಜುನಾಥ್

ಇದು ಮೋದಿ ಅವರ ಹ್ಯಾಟ್ರಿಕ್ ಚುನಾವಣೆ: ಮಂಜುನಾಥ್

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ. ಸಿಎನ್ ಮಂಜುನಾಥ್ ಅವರು ಈಗಾಗಲೇ ನಾಮಪತ್ರ ಸಲ್ಲಿಸಿ ಭರ್ಜರಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ.

ಅದರಂತೆ ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಲಯದಲ್ಲಿ ಬರುವಂತಹ ಗ್ರಾಮಗಳಿಗೆ ಭೇಟಿ ನೀಡಿ ಮತ ಪ್ರಚಾರವನ್ನು ಕೈಗೊಂಡಿದ್ದಾರೆ.

ಹೌದು, ಬೇಗೂರು ಗ್ರಾಮದ ಆಟದ ಮೈದಾನದಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಡಾ.ಸಿ ಎನ್ ಮಂಜುನಾಥ್ ಅವರು ಬೆಳ್ಳಂಬೆಳಗ್ಗೆ ಪಾರ್ಕ್ ಮತ್ತು ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ‌, ಈ ಬಾರಿ ಲೋಕಸಭಾ ಚುನಾವಣೆಗೆ ನನ್ನನ್ನು ಬೆಂಬಲಿಸಿ ಎಂದು ಮತ ಯಾಚನೆ ಮಾಡಿದ್ದಾರೆ.

ಅದೇ ರೀತಿ ಬೆಳ್ಳಂಬೆಳಗ್ಗೆ ಟೀ ಸ್ಟಾಲ್ ಒಂದಕ್ಕೆ ಭೇಟಿ ನೀಡಿ, ಮಂಜುನಾಥ್ ಅವರು ಸ್ವತಃ ತಮ್ಮ ಕೈಯಾರೆ ಟೀ ಮಾಡಿ ಸಾರ್ವಜನಿಕರಿಗೆ ನೀಡಿವು ಮೂಲಕ ಮತಯಾಚನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಾಸಕ ಎಂ ಕೃಷ್ಣಪ್ಪ ಅವರ ಜೊತೆ ಗೂಡಿ ಬೈಕ್ ಓಡಿಸುವ ಮೂಲಕ ಜನರಲ್ಲಿ ಮತಯಾಚನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್ ಅವರು, ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಬಿಸಿಲಿನ ವಾತಾವರಣ ಇರುವುದರಿಂದ ನಾವು ಬೆಳಗಿನ ಸಂದರ್ಭದಲ್ಲಿ ಹೆಚ್ಚು ಮತದಾರರನ್ನು ಭೇಟಿ ಮಾಡಿ ನಮ್ಮನ್ನು ಬೆಂಬಲಿಸಿ ಎಂದು ಮತ ಕೇಳುತ್ತಿದ್ದೇವೆ.

ಬೆಳಗಿನ ಜಾವದಲ್ಲಿ ಪಾರ್ಕ್, ಪ್ಲೇಯರ್ ಗ್ರೌಂಡ್, ಅಪಾರ್ಟ್ಮೆಂಟ್, ಟೀ ಸ್ಟಾಲ್ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ಉತ್ತಮ ಪ್ರತಿಕ್ರಿಯೆ ಜನರು ನೀಡುತ್ತಿದ್ದಾರೆ ಎಂದು ಮಂಜುನಾಥ್ ರವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಜನರು ಇಷ್ಟೊಂದು ಪ್ರೀತಿ ತೋರಿಸುತಿರುವುದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಇದು ದೇಶದಾದ್ಯಂತ ಮೋದಿ ಅವರ ಹ್ಯಾಟ್ರಿಕ್ ಚುನಾವಣೆ ಆಗಿರುವುದರಿಂದ ಈ ಬಾರಿಯೂ ಕೂಡ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ಹಂಬಲ ಎಲ್ಲಾ ಮತದಾರ ಬಾಂಧವರಲ್ಲಿದೆ ಎಂದು ಈಗ ನನ್ನ ಮನದಲ್ಲಿ ಮೂಡುತ್ತಿದೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇಡೀ ಕರ್ನಾಟಕದಲ್ಲಿ ಅತಿ ದೊಡ್ಡ ಲೋಕಸಭಾ ಕ್ಷೇತ್ರವೆಂದರೆ ಅದು ಬೆಂಗಳೂರು ಗ್ರಾಮಾಂತರ ಕ್ಷೇತ್ರ. ಈ ಕ್ಷೇತ್ರದಲ್ಲಿ ಸುಮಾರು 28 ರಿಂದ 29 ಲಕ್ಷ ಮತದಾರರು ಇದ್ದಾರೆ ಆದ್ದರಿಂದ ನಾನು ಮತದಾರರ ಮನಸ್ಸನ್ನು ಗೆಲ್ಲುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

ಇನ್ನು ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎಂ ಕೃಷ್ಣಪ್ಪ ಅವರು ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರೇ ಏನೇ ಮಾತನಾಡಿದರು, ಏನೇ ಮಾಡಿದರು ಕೂಡ ನಮ್ಮ ಮಂಜುನಾಥ್ ಅವರೇ ಗೆಲ್ಲುತ್ತಾರೆ ಎಂಬ ಮಾತನ್ನು ಹೇಳಿದರು. ಅಭಿವೃದ್ಧಿಯ ಮೂಲ ಮಂತ್ರ, ಮೋದಿ ಅವರ ದೇಶ ಅಭಿವೃದ್ಧಿ ಮಂಜುನಾಥ್ ಅವರ ಹೃದಯದ ಅಭಿವೃದ್ಧಿಯಿಂದ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಮಂಜುನಾಥ್ ಅವರ ಮತಯಾಚನೆಗೆ ಸ್ಪಂದಿಸಿದರು.

Related