ರಾಜಧಾನಿಯಲ್ಲಿ ಅಷ್ಟ ದಿಕ್ಕುಗಳಲ್ಲಿ ಮೋದಿ ಅಬ್ಬರ

ರಾಜಧಾನಿಯಲ್ಲಿ ಅಷ್ಟ ದಿಕ್ಕುಗಳಲ್ಲಿ ಮೋದಿ ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪರವಾಗಿ ಇಂದು ಪ್ರಚಾರ ಕೈಗೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ನರೇಂದ್ರ ಮೋದಿಯವರು 26 ಕಿ.ಮೀ ರೋಡ್ ಶೋ ಮಾಡಲಿದ್ದಾರೆ. ಹತ್ತು ಲಕ್ಷ ಜನ ಸೇರಿಸುವ ಟಾರ್ಗೆಟ್‌ ಬಿಜೆಪಿಗೆ ಇದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಬಿಟಿಎಂ ಲೇಔಟ್, ಪದ್ಮನಾಭನಗರ, ಚಿಕ್ಕಪೇಟೆ, ಗಾಂಧಿನಗರ, ವಿಜಯ ನಗರ, ಗೋವಿಂದರಾಜು ನಗರ, ರಾಜಾಜಿನಗರ, ಮಲ್ಲೇಶ್ವರಂನಲ್ಲಿ ಕ್ಷೇತ್ರ ವ್ಯಾಪ್ತಿಗಳಲ್ಲಿ ರೋಡ್ ಶೋ ನಡೆಯಲಿದೆ.

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಒಂದು ಲಕ್ಷ ಜನ ಸೇರಿದರೂ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಆ ಮುಖೇನ ಟಾರ್ಗೆಟ್ 20 ರೀಚ್ ಆಗುವ ಪ್ರಯತ್ನವಿದು. ರಾಜ್ಯ ಬಿಜೆಪಿಗೆ ಈಗ ಮೋದಿಯೇ ಬ್ರಹ್ಮಾಸ್ತ್ರವಾಗಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆಯಾದಾಗಿನಿಂದ ನಗರದಲ್ಲಿ ಹೆಚ್ಚು ರೋಡ್ ಶೋ ಮಾಡಲು ಬಿಜೆಪಿ ನಾಯಕರು ಮನವಿ ಮಾಡಿದ್ದರು.

ಈ ನಡುವೆ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಭದ್ರತೆಗೆ 5,000 ಕ್ಕೂ ಹೆಚ್ಚು ಪೊಲೀಸರು, 2,500 ಟ್ರಾಫಿಕ್ ಪೊಲೀಸರು ನಿಯೋಜಿಸಲಾಗಿದೆ. ಸುಮಾರು 150 ಕೆಎಸ್ಆರ್‌ಪಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ.

ಇಂದು ಬೆಳಗ್ಗೆ 9.15ಕ್ಕೆ ರಾಜಭವನದಿಂದ ಪ್ರಧಾನಿ ಮೋದಿ ಹೊರಡಲಿದ್ದು ಬೆಳಗ್ಗೆ 9.25ಕ್ಕೆ ರಸ್ತೆ ಮಾರ್ಗವಾಗಿ ಮೇಖ್ರಿ ಸರ್ಕಲ್ ಬಳಿಯ HQTC ಹೆಲಿಪ್ಯಾಡ್ ತಲುಪಲಿದ್ದಾರೆ. ಬೆಳಗ್ಗೆ 9.30ಕ್ಕೆ HQTC ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ 9.50ಕ್ಕೆ ಲೊಯೊಲಾ ಕಾಲೇಜು ಹೆಲಿಪ್ಯಾಡ್ ತಲುಪಲಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಪ್ರಧಾನಿರನ್ನು ಸ್ವಾಗತಿಸಲು ಬಿಜೆಪಿ 6 ಮುಖಂಡರು ಹಾಜರಾಗಲಿದ್ದಾರೆ.

ಬಳಿಕ ಲೊಯೊಲಾ ಕಾಲೇಜು ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಪ್ರಯಾಣಿಸಿ ಬೆಳಗ್ಗೆ 10 ಗಂಟೆಗೆ ಸೋಮೇಶ್ವರ ಭವನ ತಲುಪಿ 10 ಕಿ.ಮೀ. ವೇಗದಲ್ಲಿ ಪ್ರಧಾನಿ ರೋಡ್ ಶೋ ವಾಹನ ಸಾಗಲಿದೆ.

ಬಿಬಿಎಂಪಿ ಪೌರಕಾರ್ಮಿಕರು ಸಿರ್ಸಿ ಸರ್ಕಲ್‌ ಬಳಿ ಬೃಹತ್ ಸಂಖ್ಯೆಯಲ್ಲಿ ಪ್ರಧಾನಿಗೆ ಪುಷ್ಪವೃಷ್ಟಿ ಮಾಡಲಿದ್ದಾರೆ. ಸಿರ್ಸಿ ಸರ್ಕಲ್‌ನಲ್ಲಿ 1 ನಿಮಿಷ ರೋಡ್ ಶೋ ವಾಹನ ನಿಲುಗಡೆ ಸಾಧ್ಯತೆ ಇದೆ. ರೋಡ್ ಶೋದಲ್ಲಿ ಪ್ರಧಾನಿ ಜೊತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ.

 

Related