ಪ್ರಾಮಾಣಿಕವಾಗಿ ಜನಸೇವೆ ಮಾಡಲು ಕರೆ ನೀಡಿದ ಶಾಸಕ ಸತೀಶ್ ರೆಡ್ಡಿ

ಪ್ರಾಮಾಣಿಕವಾಗಿ ಜನಸೇವೆ ಮಾಡಲು ಕರೆ ನೀಡಿದ ಶಾಸಕ ಸತೀಶ್ ರೆಡ್ಡಿ

ಬೆಂಗಳೂರು : ದಿನೇ ದಿನೇ ಕಬಂಧಬಾಹುಗಳನ್ನು ಚಾಚುತ್ತಿರುವ ಕೊರೋನಾವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ, ಬಿಜೆಪಿ ಪಕ್ಷದ ಮುಖಂಡರು ಮತ್ತು ಬಿಬಿಎಂಪಿ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ನುಡಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕಾರ್ಯಕರ್ತರು ಕೊರೋನಾ ವಾರಿಯರ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರ  ಸೇವೆಯನ್ನು ಶ್ಲಾಘಿಸಿದರು. ನಾವು ಉತ್ತಮ ಕೆಲಸಗಳನ್ನು ಮಾಡುತ್ತಾ ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡಿದಾಗ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ.

ಹಾಗಾಗಿ ಜನಸೇವೆ, ಸಮಾಜ ಸೇವೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡೋಣ. ಪ್ರತಿಯೊಬ್ಬರು ಕುಟುಂಬದ ರೀತಿಯಲ್ಲಿ ಪಕ್ಷವನ್ನು ಮುಂದುವರೆಸುವಂತಹ ಕೆಲಸವನ್ನು ಮಾಡಬೇಕಾಗಿದೆ. ನಮ್ಮ ಕ್ಷೇತ್ರದ ಬಿಜೆಪಿಯ ಹಿಂದಿನ ಮುಖಂಡರು ಕಷ್ಟದ ಸಂದರ್ಭದಲ್ಲಿಯೂ ಪಕ್ಷದ ಸಂಘಟನೆಗೆ ಛಲಬಿಡದೆ ಹೋರಾಡಿದ ಫಲವಾಗಿ ಬಿಜೆಪಿಯು ಬಹುದೊಡ್ಡ ಪಕ್ಷವಾಗಿ ಬೆಳೆಯಲು ಹಾಗೂ ಬೊಮ್ಮನಹಳ್ಳಿಯಲ್ಲಿ ಭದ್ರಕೋಟೆಯಾಗಿ ನೆಲೆಯೂರಲು ಸಾಧ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷ ನೀಡುತ್ತಿರುವ ಹೆಚ್ಚಿನ ಅನುದಾನವನ್ನು ಬಳಸಿಕೊಂಡು ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಲಾಗಿದ್ದು, ಪ್ರಶಂಸೆಯು ಸಹ ಕೇಳಿ ಬರುತ್ತಿದೆ. ಮಹಾನಗರ ಪಾಲಿಕೆ ಸದಸ್ಯರು ಸಹ ಅದ್ಭುತವಾಗಿ ಕಾರ್ಯನಿರ್ವಹಿಸಿದ್ದು, ಅಧಿಕಾರವಧಿ ಮುಗಿಯುವವರೆಗೂ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಬೇಕು. ಜನರ ಹಿತಾಸಕ್ತಿಗೆ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಬಿಜೆಪಿ ಮುಖಂಡ ಶಿವಪ್ಪ, ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.

Related