ನೋಡಲ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಮಾಜ ಕಲ್ಯಾಣ ಸಚಿವ

ನೋಡಲ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಮಾಜ ಕಲ್ಯಾಣ ಸಚಿವ

 ಬೆಂಗಳೂರು: ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಸುದೀರ್ಘ 8 ಗಂಟೆಗಳ ಕಾಲ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಸುಮಾರು 32 ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ SCSP / TSP ಅನುದಾನದ ಬಳಕೆಯ ಕುರಿತಂತೆ ಪ್ರಗತಿ ಪರಿಶೀಲನೆಯನ್ನು ನಡೆಸಿದರು.

ಕೊಳಗೇರಿ ನಿಗಮದ SCSP/TSP ಫಲಾನುಭವಿಗಳಿಗೆ ಈವರೆಗೂ ಇದ್ದ 75000 ರೂಪಾಯಿಗಳ ಅನುದಾನವನ್ನು 1 ಲಕ್ಷಕ್ಕೆ ಏರಿಸಲು ನಿರ್ಧರಿಸಲಾಯಿತು.

ನೀರಾವರಿ ಇಲಾಖೆ ಅಡಿಯಲ್ಲಿ ಶಿವಮೊಗ್ಗ ಭಾಗದಲ್ಲಿ SCSP – TSP ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದ್ದು ಆ ಕುರಿತು ಕ್ರಮ ಜರುಗಿಸಲು ಮಾನ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಪಶು ಸಂಗೋಪನೆ ಇಲಾಖೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಎರಡು ಹಸುಗಳನ್ನು ನೀಡುವ ಬಗ್ಗೆ ಮಾನ್ಯ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪಶುಭಾಗ್ಯ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ಪಡೆದು ಸಚಿವರು ಹೇಳಿದ ಸೂಚನೆಗೆ ಅನುಸಾರವಾಗಿ ಕಾರ್ಯ ನಿರ್ವಹಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ನಂತರ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತವಾದ ನಿರ್ದೇಶನ ನೀಡಿ, ಎಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಅನುಕೂಲವಾಗಿದೆ ಎಂಬುದರ ಕುರಿತಂತೆ ಅಂಕಿ ಅಂಶಗಳನ್ನು ಒದಗಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ SCSP/TSP ಅನುದಾನವು ಸಮರ್ಥವಾಗಿ ಬಳಕೆಯಾಗಬೇಕು ಮತ್ತು ಶಿಕ್ಷಣದ ಮೂಲಕವೇ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಬದುಕಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಮಾನ್ಯ ಸಚಿವರು ತಿಳಿಸಿದರು.

ಹಂದಿ ಸಾಕಾಣೆ ಕೇಂದ್ರಗಳನ್ನು ಏಕೆ ಊರಿಂದ ಹೊರಗೆ ಇಡಬೇಕು?

ಹಂದಿ ಸಾಕಾಣೆ ಕೇಂದ್ರಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಉಂಟಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚೆ ಮೊದಲಾದಾಗ ಹಂದಿ ಸಾಕಾಣಿಕೆ ಕೇಂದ್ರಗಳನ್ನು ಏಕೆ ಊರಿಂದ ಆಚೆಗೆ ಇಡಲಾಗುತ್ತದೆ ಗೊತ್ತೇ ಎಂದು ಕೇಳಿದಾಗ, ಎಲ್ಲಾ ಅಧಿಕಾರಿಗಳು ಒಮ್ಮೆ ಯೋಚಿಸುತ್ತಿದ್ದರು.

ಆಗ ಖುದ್ದು ಸಚಿವರು ಹಂದಿಗಳ ಮೇಲೆ ಕೀಟಗಳು ಕೂತು ಅವು ಸುಮಾರು ಎರಡು ಕಿಲೋಮೀಟರ್ ಗಳಷ್ಟು ಹಾರುವುದರಿಂದ ವೈರಸ್ ಆಧಾರಿತ ಖಾಯಿಲೆಗಳು ಬರುವ ಸಂಭವ ಇರುವುದರಿಂದ ಅವುಗಳ ಸಾಕಾಣೆ ಕೇಂದ್ರಗಳನ್ನು ಊರಿಂದ ಎರಡು ಕಿಲೋಮೀಟರ್ ಆಚೆ ಇರಬೇಕೆಂದು ಹೇಳಲಾಗುತ್ತದೆ.

ಹೀಗಾಗಿ ಈ ವಿಷಯವು ವೈಜ್ಞಾನಿಕವಾಗಿದೆ ಎಂದು ಸಚಿವರು ತಿಳಿಸಿದರು.

ಸಭೆಗೆ ಬಂದ ಬಸವಣ್ಣ :

ಇಲಾಖೆಯ ಅಧಿಕಾರಿಯೊಬ್ಬರು ಅನುದಾನ ಬಳಕೆಯ ವಿಷಯದಲ್ಲಿ ಅಗತ್ಯಕ್ಕೆ ಮೀರಿ ಹೆಚ್ಚಿನ ಅನುದಾನದ ಪ್ರಸ್ತಾಪ ಮಾಡಿದಾಗ, ಮಾನ್ಯ ಸಮಾಜ ಕಲ್ಯಾಣ ಸಚಿವರು ಬಿಜ್ಜಳನು ಬಹುಮಾನ ರೂಪದಲ್ಲಿ ಬಸವಣ್ಣನವರಿಗೆ ಉಡುಗೊರೆ ನೀಡಿದಾಗ ಸಾರ್ವಜನಿಕರ ಹಣವನ್ನು ಹೀಗೆ ಖರ್ಚು ಮಾಡಬಾರದು, ಅದು ಅವರ ಕಲ್ಯಾಣಕ್ಕೇ ಸೇರಬೇಕು ಎಂದು ಹೇಳಿದ್ದನ್ನು ಸಚಿವರು ಸ್ಮರಿಸಿದರು.

SCSP/ TSP ಅನುದಾನದಿಂದ ಜರುಗುತ್ತಿರುವ ಅಭಿವೃದ್ಧಿ ಕೆಲಸಗಳ ಕುರಿತು ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

Related