ಕೊರೋನಾ ಮೃತನ ಅಂತ್ಯ ಸಂಸ್ಕಾರ ಮಾಡಿದ ಸಂಸದ

ಕೊರೋನಾ ಮೃತನ ಅಂತ್ಯ ಸಂಸ್ಕಾರ ಮಾಡಿದ ಸಂಸದ

ಕನಕಪುರ: ಕೋವಿಡ್ 19 ಹಾಗೂ ಸೋಂಕಿನಿಂದ ಬಲಿಯಾದವರ ಅಂತ್ಯ ಸಂಸ್ಕಾರದ ಕುರಿತು ಜನರಲ್ಲಿರುವ ಅಪನಂಬಿಕೆ ಮತ್ತು ಅಪಪ್ರಚಾರಗಳನ್ನು ತೊಡೆದು ಹಾಕಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ತಮ್ಮ ಕ್ಷೇತ್ರದ ವ್ಯಾಪ್ತಿಯ ಕನಕಪುರದ ನಿವಾಸಿ 73 ವರ್ಷ ವಯಸ್ಸಿನ ನರಸಿಂಹ ಶೆಟ್ಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಎಲ್ಲಾ ವಿಧಿ-ವಿಧಾನಗಳನ್ನು ಗೌರವಯುತವಾಗಿ ನೆರವೇರಿಸಲು ಸಹಕರಿಸುವ ಮೂಲಕ  ಸಮಾಜಕ್ಕೆ ಸುರೇಶ್ ಅವರು ಆದರ್ಶ ಮೆರೆದಿದ್ದಾರೆ.

ನರಸಿಂಹ ಶೆಟ್ಟಿಯವರ ಅಂತ್ಯ ಸಂಸ್ಕಾರದ ನಂತರ ಮಾತನಾಡಿದ ಸುರೇಶ್ ಅವರು, ‘ನರಸಿಂಹ ಶೆಟ್ಟಿಯವರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಜೀವ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದರು.

ಈ ಅಂತ್ಯಸಂಸ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಕನಕಪುರ ನಗರಸಭೆ ಸದಸ್ಯರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

 

 

 

Related