ರಾಜ್ಯದಲ್ಲಿ ಅಧಿಕಾರಿಗಳಿಂದ ಹಾಸಿಗೆ ಹಿಡಿದ ಕೌಶಲ್ಯ ತರಬೇತಿ

ರಾಜ್ಯದಲ್ಲಿ ಅಧಿಕಾರಿಗಳಿಂದ ಹಾಸಿಗೆ  ಹಿಡಿದ ಕೌಶಲ್ಯ ತರಬೇತಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಇಲಾಖೆಯಾದ ಕೌಶಲ್ಯ ಅಭಿವೃದ್ಧಿ ಇಲಾಖೆ  ಅಕ್ಷರಶಃ ಹಾಸಿಗೆ ಹಿಡಿದಿದೆ..!

ಇಲಾಖೆ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ಕೌಶಲ್ಯ ಅಭಿವೃದ್ಧಿ ಇಲಾಖೆ ಸಚಿವರನ್ನು ಕತ್ತಲಲ್ಲಿಟ್ಟು ಇಲಾಖೆ ಕಾರ್ಯಕ್ರಮಗಳ ದಿಕ್ಕನ್ನು ಬದಲಿಸಿದ್ದಾರೆ. ಇನ್ನು ಹೊಸದಾಗಿ ಸರಕಾರದಿಂದ ನೇಮಕಗೊಂಡಿರುವ ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರು ನಿಗಮದ ತರಬೇತಿ ವಿಭಾಗದ ಅಧಿಕಾರಿಗಳ ಅಸಹಕಾರ ಮತ್ತು ಮಾಹಿತಿ ನಿರಾಕರಣೆಯಿಂದ ಆರಂಭದಲ್ಲೇ ಮಂಕಾಗಿದ್ದಾರೆ. ಇನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಭೆಗಳಲ್ಲೇ ಕಾಲ ನೂಕುತ್ತಿದ್ದು, ಎಲ್ಲಿಯೂ ತರಬೇತಿ ಆರಂಭಿಸುವ ಪ್ರಯತ್ನಕ್ಕೇ ಕೈ ಹಾಕಿಲ್ಲ. ಬದಲಾಗಿ ಸರಕಾರ ನಿರುದ್ಯೋಗ ಯುವಕ, ಯುವತಿಯರಿಗೆ ಕೌಶಲ್ಯ ತರಬೇತಿಗಾಗಿ ನೀಡಿದ್ದ ಅನುದಾನವನ್ನು ಒಂದಷ್ಟು ಕೈಗಾರಿಕೆಗಳಿಗೆ ನೀಡಿ ಅವರನ್ನೇ ತರಬೇತಿ ನೀಡುವಂತೆ ಮಾಡಿ ಕೈ ತೊಳೆದುಕೊಂಡಿದೆ. ಆದರೆ ಕೈಗಾರಿಕೆಗಳು ಕೂಡ ಎಲ್ಲಿಯೂ ತರಬೇತಿ ಆರಂಭಿಸದೆ ಗೊಂದಲಕ್ಕೀಡಾಗಿ ಕುಳಿತಿವೆ.

ಇದರ ಪರಿಣಾಮ ಕೌಶಲ್ಯ ತರಬೇತಿಗಾಗಿ ಸರಕಾರ ನೀಡಿದ್ದ ಅತ್ಯಲ್ಪ ಅನುದಾನವೂ ಸರಿಯಾಗಿ ವೆಚ್ಚವಾಗದೆ ಸರಕಾರಕ್ಕೆ ವಾಪಸ್ ಹೋಗಿದೆ. ಇದೆಲ್ಲದರ ಪರಿಣಾಮ ಕಳೆದ 10 ತಿಂಗಳಿನಿಂದ ರಾಜ್ಯದೆಲ್ಲೆಡೆ ಯಾವುದೇ ನಿರುದ್ಯೋಗಿ ಯುವಕ, ಯುವತಿಯರಿಗೆ ಎಲ್ಲಿಯೂ ಕೌಶಲ್ಯ ಅಭಿವೃದ್ಧಿ ತರಬೇತಿ ಸಿಗದಂತಾಗಿದೆ.

ಸಚಿವರಿಗೂ ತಟ್ಟಿದೆ ಬಿಸಿ :

ಇನ್ನು ತರಬೇತಿ ಪಡೆದವರಿಗೆ ಉದ್ಯೋಗ ಅವಕಾಶ ಕೊಡಿಸಿರುವ ಬಗ್ಗೆ ಮತನಾಡುವಂತೆಯೇ ಇಲ್ಲ ಎನ್ನುವ ಸ್ಥಿತಿ ಇಲಾಖೆಯಲ್ಲಿದೆ. ಇದರ ಬಿಸಿ ಈಗ ಕೌಶಲ್ಯ ಮಂತ್ರಿ ಶರಣಪ್ರಕಾಶ್ ಪಾಟೀಲ್ ಅವರು ತಟ್ಟುತ್ತಿದ್ದು, ಅವರು ಚುನಾವಣೆ ನಿಮ್ಮಿತ್ತ ಪ್ರವಾಸ ಹೋಗುವ ಪ್ರದೇಶಗಳಲ್ಲಿ ಯುವಕರು ತರಬೇತಿಯೂ ಇಲ್ಲ, ಉದ್ಯೋಗವೂ ಇಲ್ಲ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಈ ಮಧ್ಯೆ, ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಶುಕ್ರವಾರ  ರಾಜ್ಯಕ್ಕೆ ಭೇಟಿ ನೀಡಲಿದ್ದು, ಕೌಶಲ್ಯ ಅಭಿವೃದ್ಧಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ರಾಜ್ಯಕ್ಕೆ ಬೇಕಾದ ಅನುದಾನ ಒದಗಿಸುವ ಬಗ್ಗೆ ಅವರು ಇಲಾಖೆ ಅಧಿಕಾರಿಗಳಿಂದ ಬೇಡಿಕೆಗಳನ್ನು ಆಲಿಸಲಿದ್ದಾರೆ. ಆದರೆ ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ನೆಲಕಚ್ಚಿರುವುದಿಂದ ಸಚಿವರಾಗಲಿ, ಅಧಿಕಾರಿಗಳು ಗಲಿಬಿಲಿಯಾಗಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊಟ್ಟಿದ್ದ 15 ಕೋಟಿ ವಾಪಸ್

ಸರಕಾರ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ವಿವಿಧೆಡೆ ನಿರುದ್ಯೋಗ ಯುವಕರ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸಲಿ ಎಂದು ಪ್ರತಿವರ್ಷ ಸುಮಾರು 100 ಕೋಟಿ ರೂ. ಗಳ ಅನುದಾನ ಒದಗಿಸುತ್ತದೆ. ಅದೇರೀತಿ 2023-24ನೇ ಸಾಲಿಗೆ ಸುಮಾರು 85 ಕೋಟಿ ರೂ. ಗಳ ಅನುದಾನ ನೀಡಿತ್ತು, ಈ ಅನುದಾನದಲ್ಲಿ ನಿಗಮದ ಅಧಿಕಾರಿಗಳು ಸಿಡಾಕ್ (2.50ಕೋಟಿ ) ಐಟಿಐ ಕಾಲೇಜುಗಳು (5ಕೋಟಿ) , ಕೆಜಿಟಿಟಿಐ (5.50ಕೋಟಿ ) ಹಾಗೂ ಜಿಟಿಟಿಸಿ (15ಕೋಟಿ ) ಸೇರಿದಂತೆ ಕೆಲವು ಸಂಸ್ಥೆಗಳಿಗೆ  ಹಣ ನೀಡಿ ತರಬೇತಿ ನೀಡುವಂತೆ ಮಾಡಿದೆ. ಹೀಗೆ ನಿಗಮದ ಅಧಿಕಾರಿಗಳು ಸರಿಯಾಗಿ ತರಬೇತಿ ಕಾರ್ಯಕ್ರಮ ರೂಪಿಸದೆ ಸರಕಾರ ನೀಡಿದ್ದ ಅನುದಾನದಲ್ಲಿ ಸುಮಾರು 15ಕೋಟಿ ರೂ. ಗಳಿಗೂ ಹೆ್ಚ್ಚಿನ ಅನುದಾನ ವಾಪಸ್ಸಾಗಿದೆ.

ಏನಿದು ಅಧಿಕಾರಿಗಳ ಉದ್ಯೋಗ ದ್ರೋಹ ?

ಆದರೆ ನಿಗಮದಿಂದ ಹಣ ಪಡೆಯುವ ಸಂಸ್ಥೆಗಳು ಎಲ್ಲಿಯೂ ನಿರುದ್ಯೋಗಿ ಯುವಕ, ಯುವತಿಯರಿಗೆ ತರಬೇತಿ ನೀಡುವುದಿಲ್ಲ. ಬದಲಾಗಿ ಈಗಾಗಲೇ ಕಲಿತಿರುವವರ ಕೌಶಲ್ಯವನ್ನು ಉನ್ನತೀಕರಿಸುವ ತರಬೇತಿ ನೀಡುತ್ತವೆ. ಇದಲ್ಲದೆ ನಿಗಮದ ಅಧಿಕಾರಿಗಳು ಕೆಲವು ಕೈಗಾರಿಕೆಗಳಿಗೆ ತರಬೇತಿ ನೀಡುವ ಹೊಣೆ ಹೊರಿಸಿ ಸುಮ್ಮನಾಗಿದೆ. ಅಷ್ಟಕ್ಕೂ ಈ ಸಂಸ್ಥೆಗಳು ತರಬೇತಿ ನೀಡಿದರೂ ಬರೀ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಕಾರಣ ನಿಗಮದ ಅಧಿಕಾರಿಗಳು ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಯಾವುದೇ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಅದಕ್ಕೆ ಹಣವನ್ನೂ ನೀಡುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ  ಎಸ್ ಎಸ್ ಎಲ್ ಸಿ ಮತ್ತು ನಂತರ ಶಿಕ್ಷಣ ಹೊಂದಿರುವ ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಡುತ್ತಿದ್ದ  ಖಾಸಗಿ ತರಬೇತಿ ಸಂಸ್ಥೆಗಳನ್ನು ಈ ಬಾರಿ ತರಬೇತಿ ವಿಚಾರದಿಂದಲೂ ದೂರ ಇರಿಸಲಾಗಿದೆ. ಇದರ ಪರಿಣಾಮ ರಾಜ್ಯದ ಗ್ರಾಮೀಣ ಭಾಗದಲ್ಲಿ ಬೇಸಿಗೆ ರಜೆ ಕಾಲಕ್ಕೆ ಎರಡು ತಿಂಗಳ ಅವಧಿಯಲ್ಲಿ ಕಂಪ್ಯೂಟರ್ ತರಬೇತಿ, ಬ್ಯೂಟಿ ಪಾರ್ಲರ್, ಹೊಲಿಗೆ ಯಂತ್ರ, ಎಲೆಕ್ಟ್ರೀಸಿಯನ್, ಪ್ಲಂಬರ್ ಸೇರಿದಂತೆ ವಿವಿಧ  ಕೌಶಲ್ಯ ತರಬೇತಿ ಪಡೆದು  ಸರಕಾರಿ ಮತ್ತು ಖಾಸಗಿ ಉದ್ಯೋಗ ಗಿಟ್ಟಿಸುತ್ತಿದ್ದ ಯುವಕ, ಯುವತಿಯರು ಕೆಲಸವಿಲ್ಲದೆ ಅಲೆಯುವಂತಾಗಿದೆ ಎಂದು ತರಬೇತಿ ಸಂಸ್ಥೆಗಳ  ಸಂಘದ ಮುಖಂಡರು ಹೇಳಿದ್ದಾರೆ.

 

Related