ಕೆಐಎಡಿಬಿಯಲ್ಲಿ ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ

ಕೆಐಎಡಿಬಿಯಲ್ಲಿ ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಗಳಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಎಕರೆಗಟ್ಟಲೆ ಜಮೀನುಗಳನ್ನು ಗುತ್ತಿಗೆ ಅಥವಾ ಮಾರಾಟದ ಕರಾರುಗಳಿಗೆ ಒಳಪಟ್ಟು ತರಾತುರಿಯಲ್ಲಿ ಹಲವು ಕಂಪೆನಿಗಳಿಗೆ ಹಂಚಿಕೆ ಮಾಡಿದ್ದು, ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್  ಸಂಘದ ರಾಜ್ಯಾಧ್ಯಕ್ಷ ಡಿ. ರಾಜ್ ಗೋಪಾಲ್ ಆಗ್ರಹಿಸಿದರು.

ಪ್ರೆಸ್‌ ಕ್ಲಬ್‌ ನಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್ ವಲಯದ ಕಂಪನಿಗಳಿಗೆ ನೂರಾರು ಎಕರೆ ಜಮೀನು ಹಂಚಿಕೆಯಾಗಿದೆ. ರಿಯಲ್ ಎಸ್ಟೇಟ್ ಕಂಪನಿಯವರು ಯಾವಾಗಿನಿಂದ ಕೈಗಾರಿಕಾ ಉದ್ಯಮ ಮಾಡುತ್ತಿದ್ದಾರೆ? ಕೆಐಎಡಿಬಿಯು ತನ್ನ ನಿಯಮ 7 ನ್ನು ಉಲ್ಲಂಘಿಸಿ ಈ ಮಂಜೂರಾತಿ ಮಾಡಿದ್ದು, ಕೂಡಲೇ ಇದನ್ನು ರದ್ದುಪಡಿಸಬೇಕು. ಕೆಐಎಡಿಬಿಯ ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭೂಮಿಗೆ ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ ಇಂತಹ ಹಂಚಿಕೆ ಮಾಡಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ. ಭೂಮಿ ಹಂಚಿಕೆ ಮಾಡುವ ನಕ್ಷೆಯನ್ನು ಐದು ಬಾರಿ ಬದಲಾಯಿಸಲಾಗಿದೆ. ಪಾರ್ಕ್ ಮತ್ತು ನಿಲುಗಡೆ ಸ್ಥಳಗಳನ್ನು ಕೂಡ ಬಿಡದೇ ಹಂಚಿಕೆ ಮಾಡಲಾಗಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಆನೈನ್ ಮುಖಾಂತರ ಮಾಡಬೇಕಾಗಿತ್ತು, ಆದರೆ ಆಫ್ ಲೈನ್ ಮುಖೇನ ಮಾಡಿರುವುದು ಅಕ್ರಮಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಅತ್ಯಂತ ಬೆಲೆಬಾಳುವ ಪ್ರದೇಶಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಆದರೆ, ತಮಗೆ ಬೇಕಾದವರಿಗೆ ಮನಸ್ಸ ಇಚ್ಛೆ ಹಂಚಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ. ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆ ಎಕರೆಗೆ 6 ಕೋಟಿ ಇದೆ, ಆದರೆ ಕೆಐಎಡಿಬಿಗೆ 2.5 ಕೋಟಿಗೆ ಹಂಚಿಕೆ ಮಾಡಿ ಕೆಐಎಡಿಬಿ ಕೈತೊಳೆದುಕೊಂಡಿದೆ. ಇಷ್ಟಕ್ಕೂ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಯಾಕೆ ಕರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related