ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ: ಉಮಾಪತಿಗೆ ಡಿ ಬಾಸ್‌ ಟಾಂಗ್

ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ: ಉಮಾಪತಿಗೆ ಡಿ ಬಾಸ್‌ ಟಾಂಗ್

ಬೊಮ್ಮನಹಳ್ಳಿ: ನನ್ನನ್ನು ಸ್ಟಾರ್ ಮಾಡಿದೇ ಎಂದು ಹೇಳುವ ಅಧಿಕಾರ, ಯೋಗ್ಯತೆ, ಅರ್ಹತೆ ನಿಮಗಿಲ್ಲವೆಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿಗೌಡರವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಗೇಟು ನೀಡಿದರು.

ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವುನಲ್ಲಿರುವ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿಯವರ ಪರ ರೋಡ್ ಶೋ ನಲ್ಲಿ ಪಾಲ್ಗೊಂಡು ಮಾತನಾಡಿದ ದರ್ಶನ್‌ರವರು, ಒಬ್ಬ ಸ್ಟಾರ್ ಮನೆಗೆ ನಿರ್ಮಾಪಕನಾಗಿ ಉಮಾಪತಿಗೌಡ ಬಂದರೇ ವಿನಃ ನಾನೆಂದಿಗೂ ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದು ಅವರ ಮನೆ ಬಾಗಿಲಿಗೆ ಹೋಗಿಲ್ಲ. ನೀವು ಸಿನಿಮಾ ಮಾಡಿದರೇನೆ ನಾನು ಬದುಕೋದು ಎಂದು ಕೇಳಿಕೊಂಡಿಲ್ಲ. ನನ್ನನ್ನು ಸ್ಟಾರ್ ಮಾಡಿದ್ದು ಮೆಜಿಸ್ಟಿಕ್ ಸಿನಿಮಾ ನಿರ್ಮಾಪಕ ಎಂ.ಜಿ. ರಾಮಮೂತಿ ಎಂದು ಟಾಂಗ್ ಕೊಟ್ಟರು. ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂಬ ಎಚ್ಚರಿಕೆಯನ್ನು ಕೊಟ್ಟರು.

ಕ್ಷೇತ್ರದ ಅರಕೆರೆ, ಹುಳಿಮಾವು, ಬಿಳೇಕಹಳ್ಳಿ, ಮಂಗಮ್ಮನಪಾಳ್ಯ, ಇಬ್ಬಲೂರು, ಹೆಚ್.ಎಸ್.ಆರ್. ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿಯವರೊಂದಿಗೆ ರೋಡ್ ಶೋ ನಡೆಸಿದ ದರ್ಶನ್‌ರವರು ಅಭಿಮಾನಿಗಳಲ್ಲಿ ಮತಯಾಚನೆ ಮಾಡಿದರು. ಸರಳ, ಸಜ್ಜನಿಕೆಗೆ ಮತ್ತೊಂದು ಹೆಸರಾದ ಎಂ. ಸತೀಶ್ ರೆಡ್ಡಿಯವರಿಗೆ ಈ ಬಾರಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ. ಕೊರೋನಾಅ ವೇಳೆ ತಮ್ಮ ಜೀವ ಲೆಕ್ಕಿಸದೇ ನಿರಂತರವಾಗಿ ಜನಸೇವೆಯಲ್ಲಿ ತೊಡಗಿದ್ದಾರೆ. ಕಳೆದ 15 ವರ್ಷಗಳಿಂದ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ಲಸಿಕೆ ಬಂದ ಕೂಡಲೇ ಶ್ರಮಜೀವಿಗಳು, ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರಿಗೆ ಮೊದಲ ಆದ್ಯತೆ ನೀಡಿ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೇಹಕ್ಕೆ ಮನಸೋತು ಇಂದು ನಾನು ನಿಮ್ಮ ಕ್ಷೇತ್ರಕ್ಕೆ ಬಂದಿದ್ದೇನೆ. ಅಭಿಮಾನಿಗಳೇ, ಈ ಬಾರಿ ತಮ್ಮ ಮತವನ್ನು ಎಂ. ಸತೀಶ್ ರೆಡ್ಡಿಯವರಿಗೆ ನೀಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಎಂ. ಸತೀಶ್ ರೆಡ್ಡಿಯವರು ಇಲ್ಲಸಲ್ಲದ ಆಮಿಷಗಳನ್ನು ನೀಡುವ ವ್ಯಕ್ತಿಗಳನ್ನು ನಂಬಬೇಡಿ. ಜನರ ಹಿತಕ್ಕಾಗಿ ಸತತ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೆನೆ. ಮತ್ತೊಮ್ಮೆ ನಿಮ್ಮ ಮನೆ ಮಗನಿಗೆ ಮತ ನೀಡಿ ಆಶೀರ್ವದಿಸಿ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಗುರುಮೂರ್ತಿ ರೆಡ್ಡಿ, ಭಾಗ್ಯಲಕ್ಷ್ಮಿ ಮುರಳಿ, ಭಾರತಿ ರಾಮಚಂದ್ರ, ಬಿ.ಎಸ್. ಮಂಜುನಾಥ ರೆಡ್ಡಿ, ಕೇಬಲ್ ಶ್ರೀನಿವಾಸ ರೆಡ್ಡಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ವಿಜಯಲಕ್ಷ್ಮಿ ಆನಂದ್, ಬಿಜೆಪಿ ಮಹಿಳಾ ಮುಖಂಡೆ ರಾಣಿ ಶ್ರೀನಿವಾಸ ರೆಡ್ಡಿ, ಬಿಜೆಪಿ ಮುಖಂಡರುಗಳಾದ ನರೇಂದ್ರ ಬಾಬು, ಸೋಮಸಂದ್ರಪಾಳ್ಯ ಶ್ರೀನಿವಾಸ ರೆಡ್ಡಿ, ಇಬ್ಬಲೂರು ಮುನಿರಾಜು, ಮಂಗಮ್ಮನಪಾಳ್ಯ ನಾಗೇಂದ್ರ, ಶ್ರೀನಿವಾಸ ಗೌಡ, ಎ.ಎಂ. ನರಸಿಂಹ ಮೂರ್ತಿ, ವೈ ರಮೇಶ್ ಮುಂತಾದವರು ಭಾಗವಹಿಸಿದ್ದರು.

Related