ಶಿಕ್ಷಣವೇ ನಿಜವಾದ ಶಕ್ತಿ: ಅಶ್ವತ್ಥನಾರಾಯಣ

ಶಿಕ್ಷಣವೇ ನಿಜವಾದ ಶಕ್ತಿ: ಅಶ್ವತ್ಥನಾರಾಯಣ

ಮಾಗಡಿ, ಜೂ 25: ‘ನಾವು ನಾಲ್ವರು ಸಹೋದರರು. ನನ್ನ ಮೂವರು ಅಣ್ಣಂದಿರೂ ಎಂಜಿನಿಯರುಗಳು. ಸ್ವತಃ ಶಿಕ್ಷಕರ ಮಗನಾದರೂ ನನಗೆ ಶಿಕ್ಷಣದಲ್ಲಿ ಅಂತಾ ಆಸಕ್ತಿ ಇರಲಿಲ್ಲ. ಆದರೆ, ರಾಜಕೀಯದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಇತ್ತು. ಅದು ಇವತ್ತು ನನ್ನನ್ನು ಇಲ್ಲಿಗೆ ತಂದು‌ ನಿಲ್ಲಿಸಿದೆ.

ಇದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಮುಕ್ತ ಮಾತು. ಇದಕ್ಕೆ ಸಾಕ್ಷಿಯಾಗಿದ್ದು, ಇಲ್ಲಿನ ಬಿಜಿಎಸ್ ಪದವಿಪೂರ್ವ ಕಾಲೇಜು. ಸಚಿವರ ಇಂತಹ ಮಾತುಗಳಿಗೆ ಅಲ್ಲಿನ 800 ಮಕ್ಕಳೂ ಕಿವಿಯಾದರು. ಮಕ್ಕಳಲ್ಲಿ ವಿದ್ಯೆ ಎಷ್ಟು ಮಹತ್ವದ್ದು ಎನ್ನುವುದನ್ನು ಸಚಿವರು ದೃಷ್ಟಾಂತಗಳೊಂದಿಗೆ ಮನದಟ್ಟು ಮಾಡಿಸುತ್ತ ಹೋದರು.

ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮಿಗಳ ಒತ್ತಾಸೆಗೆ ಮಣಿದು, ಬಿಜಿಎಸ್ ಕಾಲೇಜಿಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಲಹರಿಯಲ್ಲಿ ಮಾತನಾಡಿದರು.

ಮಕ್ಕಳು ಏನೇನೋ ಆಸೆ ಇಟ್ಟುಕೊಳ್ಳಲು ಹೋಗಬಾರದು. ಬದಲಿಗೆ, ಬದುಕಿನ ಆಸೆಗಳನ್ನು ಪೂರೈಸಿಕೊಳ್ಳಲು ಶಿಕ್ಷಣ ಮುಖ್ಯ ಅನ್ನುವುದನ್ನು ಅರಿಯಬೇಕು ಎಂದು ಅವರು ಸಲಹೆ ನೀಡಿದರು.

‘ನನಗೆ ಮೊದಲಿನಿಂದಲೂ ರಾಜಕಾರಣದಲ್ಲಿ ಆಸಕ್ತಿ ಇತ್ತು. ಆದರೆ, ಮನೆಯವರ ಮಾತಿಗೆ ಬೆಲೆ ಕೊಟ್ಟು ಎಂಬಿಬಿಎಸ್ ಓದಿದೆ. ಈಗ ಬದುಕಿನಲ್ಲಿ ನನ್ನ ರಾಜಕೀಯ ಕನಸು ಈಡೇರಿಸಿಕೊಂಡು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಅವರು ತಮ್ಮ ಬದುಕಿನ ಪುಟಗಳನ್ನು ತೆರೆದಿಟ್ಟರು.

Related