ಭಕ್ತರಿಂದ ಗವಿಮಠಕ್ಕೆ ಬಂತು 3.71 ಕೋಟಿ ದೇಣಿಗೆ

ಭಕ್ತರಿಂದ ಗವಿಮಠಕ್ಕೆ ಬಂತು 3.71 ಕೋಟಿ ದೇಣಿಗೆ

ಕೊಪ್ಪಳ ಜು14: ಇಲ್ಲಿನ ಗವಿಸಿದ್ದೇಶ್ವರ ಮಠದಲ್ಲಿ ಐದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಇದುವರೆಗೆ ಭಕ್ತರು ಒಟ್ಟು ₹3,71,81,931 ದೇಣಿಗೆ ನೀಡಿದ್ದಾರೆ.

ಗವಿಮಠದ ಆವರಣದಲ್ಲಿ ಜೂನ್‌ 23ರಂದು ಈ ಕಾಮಗಾರಿ ಉದ್ಘಾಟನೆ ನೆರವೇರಿತ್ತು.

ಆಗ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ‘ಎಷ್ಟು ಶಕ್ತಿ ಇದೆಯೊ ಅಷ್ಟೂ ಮಕ್ಕಳನ್ನು ಓದಿಸುವೆ. ಅವರ ಏಳಿಗೆಗಾಗಿ ಜೋಳಿಗೆ ಹಿಡಿಯುವೆ’ ಎಂದು ಭಾವುಕರಾಗಿ ಹೇಳಿದ್ದರು. ಅವರ ಈ ಮಾತುಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಭಾರಿ ಸಂಚಲನ ಮೂಡಿಸಿತ್ತು. ವಿದ್ಯಾರ್ಥಿಗಳು, ಭಕ್ತರು ಸ್ವಯಂಪ್ರೇರಿತರಾಗಿ ದೇಣಿಗೆ ನೀಡಿದ್ದಾರೆ.

ಕ್ಯುಆರ್‌ ಕೋಡ್‌ ಮೂಲಕ ₹19,68,030 ಮತ್ತು ಎಸ್‌.ಎಂ. ಚಾರಿಟಬಲ್‌ ಟ್ರಸ್ಟ್‌ ಮೂಲಕ ₹3,52,13,901 ಹಣ ದೇಣಿಗೆ ಬಂದಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಭಕ್ತರ ದೇಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ ‘ಓದುವ ಮಕ್ಕಳಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಅದೇ ಕಾರಣಕ್ಕೆ ಎಲ್ಲರೂ ದೇಣಿಗೆ ನೀಡುತ್ತಿದ್ದಾರೆ. ವಸತಿ ನಿಲಯ ನಿರರ್ಗಳವಾಗಿ ನಡೆದುಕೊಂಡು ಹೋಗುವಂತೆ ಮಾಡಲು ಹೊಸ ಯೋಜನೆ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಸಚಿವರ ಕುಟುಂಬದಿಂದ ಸಲ್ಲಿಕೆ: ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಅವರು ವೈಯಕ್ತಿಕವಾಗಿ ಸ್ವಾಮೀಜಿಯ ಕಾರ್ಯಕ್ಕೆ ₹1.8 ಕೋಟಿ ನೀಡುವುದಾಗಿ ತಿಳಿಸಿದ್ದರು.

ಅದರಂತೆ ಗುರುಪೂರ್ಣಿಮೆ ದಿನವಾದ ಬುಧವಾರ ಸಚಿವರ ಪುತ್ರ ಸಿದ್ದಾರ್ಥ್‌ ಹಾಗೂ ಕುಟುಂಬದವರು ಮಠಕ್ಕೆ ಬಂದು ಸ್ವಾಮೀಜಿಗೆ ಚೆಕ್‌ ಹಸ್ತಾಂತರಿಸಿದರು. ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.

Related