ಜೆಡಿಎಸ್ ಆಯ್ಕೆ ಪ್ರಶ್ನಿಸಲು ಸಿದ್ದರಾಮಯ್ಯ ಯಾರು?

ಜೆಡಿಎಸ್ ಆಯ್ಕೆ ಪ್ರಶ್ನಿಸಲು ಸಿದ್ದರಾಮಯ್ಯ ಯಾರು?

ಕಲಬುರಗಿ : ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ನಮ್ಮ ಪಕ್ಷದ ನಿರ್ಧಾರ. ಅದನ್ನು ಪ್ರಶ್ನಿಸಲು ಸಿದ್ದರಾಮಯ್ಯ ಯಾರು?’ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರಿಗೆ ಟಿಕೆಟ್ ಕೊಡಬೇಕು. ಯಾರಿಗೆ ಕೊಡಬಾರದು ಎಂಬುದನ್ನು ಕೇಳುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ. ಅವರು ಯಾವ ಸೀಮೆಯ ದೊಣ್ಣೆನಾಯಕ ಎಂದು ನಮ್ಮ ಪಕ್ಷದ ವಿಚಾರದಲ್ಲಿ ತಲೆ ಹಾಕುತ್ತಾರೆ’ ಎಂದು ಪ್ರಶ್ನಿಸಿದರು.

ಸಿಂದಗಿ ಹಾಗೂ ಹಾನಗಲ್‌ನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದವರು ಉತ್ತಮ ವಿದ್ಯಾಭ್ಯಾಸ ಪಡೆದಿದ್ದಾರೆ. ಅವರನ್ನು ರಾಜಕಾರಣಕ್ಕೆ ತಂದರೆ ಸಮಾಜಕ್ಕೆ ಒಳಿತಾಗುತ್ತದೆ. ಇದರಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇಲ್ಲ. ಜೆಡಿಎಸ್ ಸ್ವತಂತ್ರವಾಗಿ ರಾಜಕಾರಣ ನಡೆಸುತ್ತದೆಯೇ ಹೊರತು ಯಾವುದೇ ಪಕ್ಷದ ಬಿ ಟೀಮ್ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಆರ್‌ಎಸ್‌ಎಸ್‌ಗೂ ಈಗ ಇರುವ ಆರ್‌ಎಸ್‌ಎಸ್ ಸಂಘಟನೆಗೂ ಬಹಳ ವ್ಯತ್ಯಾಸವಿದೆ. ಇಂದು ಧರ್ಮದ ಆಧಾರಿತವಾಗಿ ಜನರನ್ನು ಒಡೆಯುವ, ಕೋಮು ಗಲಭೆ ಎಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ಜಾತ್ಯತೀತತೆ, ಕೋಮುವಾದ ವಿಚಾರಗಳು ಪರಿಗಣನೆಗೆ ಬರುವುದಿಲ್ಲ. ಕಲಬುರ್ಗಿಯ ಹಲವು ಬಡಾವಣೆಗಳಲ್ಲಿ ಇಂದಿಗೂ ಜನರು ನಾಯಿಗಿಂತ ಕಡೆಯದಾದ ಜೀವನವನ್ನು ನಡೆಸುತ್ತಿದ್ದಾರೆ. ಅವರ ಜೀವನ ಮಟ್ಟವನ್ನು ಸುಧಾರಿಸಲು ಯಾವ ಪಕ್ಷ ಪ್ರಯತ್ನಿಸುತ್ತದೋ ಅಂಥವರಿಗೆ ಬೆಂಬಲ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ, ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಮುಖಂಡ ಕೃಷ್ಣಾರೆಡ್ಡಿ, ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ ಇದ್ದರು.

Related