ಬಿಜೆಪಿಯವರಿಗೆ ನಾವು ಚಿಪ್ಪು ಕೊಟ್ಟಿಲ್ಲ: ಡಿಸಿಎಂ

ಬಿಜೆಪಿಯವರಿಗೆ ನಾವು ಚಿಪ್ಪು ಕೊಟ್ಟಿಲ್ಲ: ಡಿಸಿಎಂ

ಬೆಂಗಳೂರು: ರಾಜ ಬಿಜೆಪಿ ನಾಯಕರು ನಮ್ಮ ಖಾಲಿ ಚೊಂಬು ಜಾಹೀರಾತಿನಿಂದ ಎಚ್ಚೆತ್ತುಗೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬಿಜೆಪಿಯವರು ಜಾಹೀರಾತು ನೀಡಿದ್ದು, ನಮ್ಮ ಜನರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಯೋಚನೆ ಮಾಡುವ ಶಕ್ತಿ, ಪ್ರಜ್ಞೆ ಎರಡೂ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನರಿಗೆ ಬಿಜೆಪಿ ಬಹಳ ಅನ್ಯಾಯ ಮಾಡಿದೆ ಎಂದು ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ ಇಬ್ಬರೂ ಭಾಷಣ ಮಾಡಿದ್ದರು. 15 ಲಕ್ಷ ಹಣ ಎಷ್ಟು ಜನರ ಖಾತೆಗೆ ಹೋಗಿದೆ, ಎಷ್ಟು ಉದ್ಯೋಗ ಸಿಕ್ಕಿದೆ ಎಂದು ನಾನು, ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸಲಿ ಎಂದು ತಿಳಿಸಿದರು.

ನಾವು ಚಿಪ್ಪು ಕೊಟ್ಟಿಲ್ಲ. ಕನ್ನಡದ ಬಾವುಟ ಹಿಡಿದು ಹೋರಾಟ ಮಾಡುವವರು ನಾವು, ಕನ್ನಡಿಗರ ಪರವಾಗಿ ನಮ್ಮ ತೆರಿಗೆ, ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ ಎಂದರು.

ದೇಶದಲ್ಲಿ ಎಲ್ಲರೂ ಸಮಾನರು ಎಂಬ ಅರಿವು ಪ್ರಧಾನಿಗಳಿಗೆ ಇರಬೇಕು. ಮಾನ್ಯ ಪ್ರಧಾನಿಗಳು ಈ ದೇಶದ ಮಹತ್ವದ ಹುದ್ದೆಯಲ್ಲಿ ಕುಳಿತಿರುವವರು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಈ ದೇಶದ ಎಲ್ಲಾ ನಾಗರಿಕರು ಸಮಾನರು ಎನ್ನುವ ಅರಿವು ಇರಬೇಕು. ಬೇಧ, ಭಾವ ಮಾಡುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಇದು ಇಡೀ ದೇಶ ಮತ್ತು ಪ್ರಪಂಚಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ ಎಂದರು.

ಮುಸ್ಲಿಮರಿಗೆ ಬಿಜೆಪಿಯಿಂದ ಮಾನಸಿಕ ಹಿಂಸೆ

ನಮ್ಮದು ಸರ್ವ ಜನಾಂಗದ ತೋಟ. ಮುಸ್ಲಿಂ ಧರ್ಮಿಯರಿಗೆ ಚಿತ್ರಹಿಂಸೆ ನೀಡಿ ಈ ದೇಶ ಬಿಟ್ಟು ಹೋಗಬೇಕು ಎನ್ನುವಂತಹ ವಾತಾವರಣ ಬಿಜೆಪಿ ನಿರ್ಮಾಣ ಮಾಡುತ್ತಿದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಸಂವಿಧಾನದ ಪ್ರಕಾರ ನಡೆಯುತ್ತಿದ್ದೇವೆ. ಆದ ಕಾರಣ ಯಾವುದೇ ಅಪರಾಧ ಪ್ರಕರಣ ನಡೆದರೂ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ ಎಂದರು.

 

 

Related