ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕ ಗಾಂಧಿ

ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕ ಗಾಂಧಿ

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕೇಂದ್ರ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಮತ ಪ್ರಚಾರದಲ್ಲಿ ತೊಡಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರ ಪರವಾಗಿ ಇಂದು ಸೋಮವಾರ ಏಪ್ರಿಲ್ 23ರಂದು ಪ್ರಿಯಾಂಕ ಗಾಂಧಿಯವರು ಅಬ್ಬರದ ಪ್ರಚಾರವನ್ನು ಮಾಡಿದ್ದಾರೆ.

ಹೆಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ನ್ಯಾಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕ ಗಾಂಧಿಯವರು, ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ದೇಶದಲ್ಲಿ ಎಲ್ಲ ಬಡವ ದಿನ ದಲಿತ, ಹಿಂದುಳಿದ ವರ್ಗಗಳನ್ನು ಸಮವಾಗಿ ನೋಡುವ ಪಕ್ಷಿ ಎಂದರೆ ಅದು ಕಾಂಗ್ರೆಸ್ ಪಕ್ಷ, ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯ ರೆಡ್ಡಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಇನ್ನು ಚುನಾವಣೆಗೂ ಮುಂಚೆ ನಾನು ಬೆಂಗಳೂರಿಗೆ ಆಗಮಿಸಿ ಸಭೆ ನಡೆಸಿದ್ದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತೆ ಆಶೀರ್ವಾದ ಮಾಡಿದ್ದು ನನಗೆ ಸಂತಸ ತಂದಿದೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 1 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳಿಗೆ 2 ಸಾವಿರ ದೊರಕುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ ರೇಷನ್ ದೊರೆಯುತ್ತಿದೆ. ಶಕ್ತಿ ಯೋಜನೆಯಡಿಯಲ್ಲಿ ಉಚಿತ ಪ್ರಯಾಣ ಮಹಿಳೆಯರಿಗೆ ಲಭಿಸಿದೆ. ಯುವನಿಧಿ ಯೋಜನೆಯಡಿ ಲಕ್ಷಾಂತರ ಯುವಕರಿಗೆ ಹಣ ಹೋಗುತ್ತಿದೆ. ದೇಶದಾದ್ಯಂತ ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್.

ಗ್ಯಾರಂಟಿ ಯೋಜನೆ ರೂಪಿಸಿ ಅವುಗಳನ್ನು ಜಾರಿಗೆ ತಂದಿದ್ದೇವೆ. ಚುನಾವಣೆಯಲ್ಲಿ ನ್ಯಾಯ ಪತ್ರವೆಂದು ಪ್ರಣಾಳಿಕೆ ಹೊರಡಿಸಿದ್ದು, ಚುನಾವಣೆಯ ನಂತರ ನ್ಯಾಯ ಪತ್ರ ಜಾರಿಗೆ ಬರಲಿದೆ. ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ಖಾತೆಗೆ ಜಮೆಯಾಗಲಿದೆ. ಯುವಕರಿಗಾಗಿ ಅಪ್ರೆಂಟಿಷಿಪ್ ಯೋಜನೆಯಡಿ ವಾರ್ಷಿಕ 1 ಲಕ್ಷ ದೊರೆಯಲಿದೆ. ಪ್ರತಿಯೊಂದು ಜಿಲ್ಲೆಯಲ್ಲಿ 5 ಸಾವಿರ ಕೋಟಿ ಸ್ಟಾರ್ಟ್ ಅಪ್ ಫಂಡ್ ದೊರೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ, ಬೊಮ್ಮನಹಳ್ಳಿ ವಿ.ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಂಗಲಹಳ್ಳಿ ವಾಸುದೇವರೆಡ್ಡಿ, ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಮಾಜಿ ನಗರಸಭಾ ಸದಸ್ಯ ಕೆ. ರಮೇಶ್ ಮತ್ತಿತರರು ಇದ್ದರು.

Related